KRS Dam Water Level: ಕೆಆರ್‌ಎಸ್ ಡ್ಯಾಂನಲ್ಲಿ ಒಂದೇ ದಿನ ಭರ್ಜರಿ ಒಳಹರಿವು; ಸಂಪೂರ್ಣ ಮಾಹಿತಿ ಇಲ್ಲಿದೆ
ಮೈಸೂರು, ಜುಲೈ 01: ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿ ಒಳಹರಿವು ಹೆಚ್ಚಳವಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.
ಭಾನುವಾರ ಸುರಿದ ಮಳೆಯಿಂದಾಗಿ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಕಡಿಮೆಯಾದರೂ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ 94 ಅಡಿ ಗಡಿ ದಾಟಿದೆ ಮತ್ತು 100 ಅಡಿಯ ಗಡಿಗೆ ತಲುಪಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ಶನಿವಾರ ಕೆಆರ್‌ಎಸ್ ಅಣೆಕಟ್ಟಿಗೆ 18,644 ಕ್ಯೂಸೆಕ್ ಒಳಹರಿವು ಇತ್ತು. ಭಾನುವಾರ 12,867 ಕ್ಯೂಸೆಕ್‌ಗೆ ಕುಸಿದಿದೆ. ಅಣೆಕಟ್ಟೆಯ ನೀರಿನ ಮಟ್ಟ 94.4 ಅಡಿ ಮುಟ್ಟಿದೆ.

ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲೂಕಿನ ಕಬಿನಿ ಅಣೆಕಟ್ಟಿನ ನೀರಿನ ಮಟ್ಟ ಭಾನುವಾರ 2276.3 ಅಡಿಗಳಿಗೆ ತಲುಪಿದ್ದು, ಗರಿಷ್ಠ ಮಟ್ಟ 2284 ಅಡಿಗಳಷ್ಟಿದ್ದು, 9,179 ಕ್ಯೂಸೆಕ್ ಒಳಹರಿವು ಇದೆ. ಅದೇ ರೀತಿ ಹಾಸನದ ಹೇಮಾವತಿ ಅಣೆಕಟ್ಟೆಗೆ 5,569 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೊಡಗಿನ ಹಾರಂಗಿ ಅಣೆಕಟ್ಟೆಗೆ 294 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಭಾನುವಾರ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಇಡೀ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಹಲವೆಡೆ ತುಂತುರು ಮಳೆಯಾಗಿದೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದ ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಸಚಿವ ಚೆಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ. ಈಗಲೇ ನೀರು ಬಿಟ್ಟರೆ ಬೆಂಗಳೂರಿಗೆ ನೀರಿನ ಸಮಸ್ಯೆ ಆಗಬಹುದು. ಜೊತಗ ರೈತರೂ ಭತ್ತ ನಾಟಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನೀರಿಲ್ಲದಿದ್ದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ - 95.50 ಅಡಿ
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 19.487 ಟಿಎಂಸಿ
ಒಳ ಹರಿವು - 9,369 ಕ್ಯೂಸೆಕ್
ಹೊರ ಹರಿವು - 518 ಕ್ಯೂಸೆಕ್












Click it and Unblock the Notifications