ಕೆಪಿಎಸ್‌ಸಿ : ಸುದರ್ಶನ್ ನೇಮಕಕ್ಕೆ ರಾಜ್ಯಪಾಲರ ಒಪ್ಪಿಗೆ ಇಲ್ಲ
ಬೆಂಗಳೂರು, ಮಾ. 26 : ಸರ್ಕಾರ ಮತ್ತು ರಾಜಭವನದ ನಡುವಿನ ಕೆಪಿಎಸ್‌ಸಿ ಫೈಟ್ ಮುಂದುವರೆದಿದೆ. ಸರ್ಕಾರ ಕಳುಹಿಸಿದ್ದ 8 ಮಂದಿಯ ಪಟ್ಟಿಯಲ್ಲಿ ನಾಲ್ವರು ಸದಸ್ಯರ ನೇಮಕಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದ ವಿ.ಆರ್.ಸುದರ್ಶನ್ ನೇಮಕಕ್ಕೆ ಅಂಕಿತ ಹಾಕಿಲ್ಲ.
ಕರ್ನಾಟಕ ಸರ್ಕಾರ ಕೆಪಿಸಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಲು 8 ಮಂದಿಯ ಪಟ್ಟಿಯನ್ನು ಮೂರು ತಿಂಗಳ ಹಿಂದೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಕಳುಹಿಸಿತ್ತು. ಮಾ. 25ರ ಬುಧವಾರ ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿ ಕಡತವನ್ನು ಸರ್ಕಾರಕ್ಕೆ ವಾಪಸ್ ಕಳಿಸಿದ್ದಾರೆ. [ಸುದರ್ಶನ್ ವಿರುದ್ಧ ಭೂ ಒತ್ತುವರಿ ದೂರು]

ಸದಸ್ಯರ ನೇಮಕಕ್ಕೆ ಒಪ್ಪಿಗೆ : ರಾಜ್ಯಪಾಲರು ಪ್ರೊ. ಗೋವಿಂದಯ್ಯ, ರಘುನಂದನ್ ರಾಮಣ್ಣ, ಕಲಬುರ್ಗಿ ವಿ.ವಿ. ಪ್ರಾಧ್ಯಾಪಕಿ ನಾಗಾಬಾಯಿ ಬುಳ್ಳಾ, ಐಎಫ್‌ಎಸ್ ಅಧಿಕಾರಿ ಮೈಕಲ್ ಸೈಮನ್ ಬರೆಟ್ಟೊ ಅವರನ್ನು ಕೆಪಿಎಸ್‌ಸಿ ಸದಸ್ಯರಾಗಿ ನೇಮಕ ಮಾಡಲು ಅಂಕಿತ ಹಾಕಿದ್ದಾರೆ. [ಅಧ್ಯಕ್ಷ ಸ್ಥಾನಕ್ಕೆ ವಿ.ಆರ್.ಸುದರ್ಶನ್?]
ಸುದರ್ಶನ್‌ಗೆ ಒಪ್ಪಿಗೆ ಇಲ್ಲ : ಇನ್ನು ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಿದ್ದ ವಿ.ಆರ್. ಸುದರ್ಶನ್, ಸದಸ್ಯ ಸ್ಥಾನಕ್ಕೆ ಶಿಫಾರಸ್ಸಾಗಿದ್ದ ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯ ಡಾ.ರವಿಕುಮಾರ್, ಐಪಿಎಸ್ ಅಧಿಕಾರಿ ಸೈಯದ್ ಉಲ್ಫತ್ ಹುಸೇನ್, ಕೆಎಎಸ್ ಅಧಿಕಾರಿ ಕೆ.ಎಸ್. ಮೃತ್ಯುಂಜಯ ಅವರ ನೇಮಕಕ್ಕೆ ಒಪ್ಪಿಗೆ ನೀಡಿಲ್ಲ. [ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಗುದ್ದಾಟ]

ಬಿಜೆಪಿ ದೂರು ನೀಡಿತ್ತು : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಗೆ ಶಿಫಾರಸುಗೊಂಡಿರುವ ವಿ.ಆರ್. ಸುದರ್ಶನ್ ಜಮೀನು ಒತ್ತುವರಿ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು, ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಸುದರ್ಶನ್ ಅವರನ್ನು ನೇಮಕ ಮಾಡಬಾರದು ಎಂದು ಮನವಿ ಮಾಡಿತ್ತು.
ಕರ್ನಾಟಕ ಸರ್ಕಾರ 2014ರ ಡಿ. 24ರಂದು ಕೆಪಿಎಸ್‌ಸಿಗೆ ಅಧ್ಯಕ್ಷ ಹಾಗೂ ಏಳು ಸದಸ್ಯರನ್ನು ನೇಮಕ ಮಾಡುವ ಶಿಫಾರಸು ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿತ್ತು. ಇದರಲ್ಲಿ ನಾಲ್ವರು ಸದಸ್ಯರ ನೇಮಕಕ್ಕೆ ಒಪ್ಪಿಗೆ ದೊರೆತಿದ್ದು, ಕಡತ ರಾಜ್ಯ ಸರ್ಕಾರಕ್ಕೆ ವಾಪಸ್ ಬಂದಿದೆ.
ಅಂದಹಾಗೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಅವರು 2013ರ ಮೇನಲ್ಲಿ ನಿವೃತ್ತಿಯಾಗಿದ್ದರು. ನಂತರ ಅಧ್ಯಕ್ಷ ಹುದ್ದೆ ಖಾಲಿ ಇದೆ. ಅಧ್ಯಕ್ಷ ಸ್ಥಾನಕ್ಕೆ ವಿ.ಆರ್.ಸುದರ್ಶನ್ ನೇಮಕ ಮಾಡುವ ಸರ್ಕಾರದ ಶಿಫಾರಸ್ಸಿಗೆ ರಾಜ್ಯಪಾಲರು ಒಪ್ಪಿಗೆ ನೀಡಿಲ್ಲ.











Click it and Unblock the Notifications