ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 4,635 ಎಫ್‌ಡಿಎ, ಎಸ್‌ಡಿಎ ನೇಮಕಾತಿಗೆ ಶೀಘ್ರವೇ ಅಧಿಸೂಚನೆ

ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಯುವಜನತೆಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಶೀಘ್ರದಲ್ಲೇ ಭರ್ಜರಿ ಸಿಹಿಸುದ್ದಿ ನೀಡಲು ಸಜ್ಜಾಗಿದೆ. ಹೌದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 4,635 ಪ್ರಥಮ ದರ್ಜೆ ಸಹಾಯಕ (FDA) ಹಾಗೂ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ.

ವಿಶೇಷವಾಗಿ ಈ ಬಾರಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಬರುವ ಪರೀಕ್ಷೆಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

KPSC FDA SDA Recruitment 2026 Notification For 4635 Posts Soon With New Exam Rules And Patterns

ಕೆಪಿಎಸ್‌ಸಿ ಎಫ್‌ಡಿಎ ಎಸ್‌ಡಿಎ ನೇಮಕಾತಿ ಅಧಿಸೂಚನೆ

ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಶಿಕ್ಷಕರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ತಕ್ಷಣವೇ ಈ ಬೃಹತ್ ನೇಮಕಾತಿಗೆ ಚಾಲನೆ ಸಿಗಲಿದೆ. ಒಟ್ಟು 4,635 ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ವಿಭಾಗದ ಮೀಸಲಾತಿಯಡಿ 1,038 ಹುದ್ದೆಗಳನ್ನ ಭರ್ತಿ ಮಾಡಲಾಗುವುದು ಎಂದು ತಿಳಿದುಬಂದಿದೆ. ಇದರಿಂದಾಗಿ ಆ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಭಾರಿ ಅನುಕೂಲವಾಗಲಿದೆ.

ಪರೀಕ್ಷಾ ನಿಯಮಗಳಲ್ಲಿ ಮಹತ್ವದ ತಿದ್ದುಪಡಿ

ಮುಂಬರುವ ನೇಮಕಾತಿ ಪ್ರಕ್ರಿಯೆಯನ್ನ ಮತ್ತಷ್ಟು ಪಾರದರ್ಶಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ನಾಗರಿಕ ಸೇವೆಗಳ ನಿಯಮಗಳಿಗೆ ಮಹತ್ವದ ಬದಲಾವಣೆ ತಂದಿದೆ. 1978ರ ಹಳೆಯ ಲಿಪಿಕ ಹುದ್ದೆಗಳ ನಿಯಮಗಳನ್ನ ತಿದ್ದುಪಡಿ ಮಾಡಿ ಹೊಸ ಅಧಿಸೂಚನೆಯನ್ನ ಹೊರಡಿಸಲಾಗಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿಯೇ ಈ ತಿದ್ದುಪಡಿಯ ಕರಡನ್ನ ರಾಜ್ಯಪತ್ರದಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಇದೀಗ ಬಂದಿರುವ ಎಲ್ಲಾ ಆಕ್ಷೇಪಣೆಗಳನ್ನ ಕೂಲಂಕಷವಾಗಿ ಪರಿಶೀಲಿಸಿ, ಅಂತಿಮ ನಿಯಮಗಳನ್ನ ರೂಪಿಸಿ ಜಾರಿಗೆ ತರಲಾಗಿದೆ.

ಎಫ್‌ಡಿಎ ಮತ್ತು ಎಸ್‌ಡಿಎ ಶೈಕ್ಷಣಿಕ ವಿದ್ಯಾರ್ಹತೆ

ಹೊಸದಾಗಿ ಜಾರಿಗೆ ಬಂದಿರುವ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಶೈಕ್ಷಣಿಕ ಅರ್ಹತೆಗಳನ್ನ ಸ್ಪಷ್ಟಪಡಿಸಲಾಗಿದೆ. ಪ್ರಥಮ ದರ್ಜೆ ಸಹಾಯಕ (FDA) ಹಾಗೂ ತತ್ಸಮಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಪದವಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಅದೇ ರೀತಿ ಕಿರಿಯ ಸಹಾಯಕ, ದ್ವಿತೀಯ ದರ್ಜೆ ಸಹಾಯಕ (SDA) ಅಥವಾ ಅದಕ್ಕೆ ಸಮಾನವಾದ ಹುದ್ದೆಗಳಿಗೆ ಪದವಿಪೂರ್ವ ಶಿಕ್ಷಣ (ಪಿಯುಸಿ) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ ಮಾದರಿ ಹಾಗೂ ಋಣಾತ್ಮಕ ಮೌಲ್ಯಮಾಪನ

ಗ್ರೂಪ್-ಸಿ (ತಾಂತ್ರಿಕ ಹಾಗೂ ತಾಂತ್ರಿಕೇತರ) ಹುದ್ದೆಗಳ ಪರೀಕ್ಷಾ ಸ್ವರೂಪದಲ್ಲೂ ಕೆಲವು ಪ್ರಮುಖ ಬದಲಾವಣೆಗಳನ್ನ ಮಾಡಲಾಗಿದೆ. ಹೊಸ ಮಾದರಿಯ ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಯು ಪತ್ರಿಕೆ-1 ಮತ್ತು ಪತ್ರಿಕೆ-2 ಎಂಬ ಎರಡು ಕಡ್ಡಾಯ ಪತ್ರಿಕೆಗಳನ್ನ ಒಳಗೊಂಡಿರಲಿದೆ.

ಪ್ರತಿಯೊಂದು ಪತ್ರಿಕೆಗೂ 100 ಅಂಕಗಳನ್ನ ನಿಗದಿಪಡಿಸಲಾಗಿದ್ದು, ಒಟ್ಟಾರೆ 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮುಖ್ಯವಾಗಿ, ಈ ಬಾರಿ ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಅಂದರೆ ನೆಗಿಟಿವ್‌ ಮಾರ್ಕಿಂಗ್‌ ವ್ಯವಸ್ಥೆಯು ಅನ್ವಯವಾಗಲಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ಪರೀಕ್ಷೆ ಎದುರಿಸಬೇಕಿದೆ.

ಸೇವಾ ನಿಯಮಗಳು

ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯಲ್ಲೇ ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಯ ಶಿಸ್ತು, ಸೇವಾ ವಿಭಾಗಗಳು ಮತ್ತು ಹುದ್ದೆಯ ಶ್ರೇಣಿಯನ್ನ ಸ್ಪಷ್ಟವಾಗಿ ನಮೂದಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅಭ್ಯರ್ಥಿಗಳು ನೀಡಿದ ಆದ್ಯತೆಯ ಮೇರೆಗೆ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಒಮ್ಮೆ ನೇಮಕಾತಿಗೊಂಡ ನಂತರ, ಅಭ್ಯರ್ಥಿಗಳು ರಾಜ್ಯದ ಯಾವುದೇ ಮೂಲೆಯಲ್ಲಾದರೂ ಸೇವೆ ಸಲ್ಲಿಸಲು ಸಿದ್ಧರಿರಬೇಕು.

ಒಂದು ವೇಳೆ ನೇಮಕಾತಿ ಆದೇಶ ಪಡೆದ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗಲು ವಿಫಲನಾದರೆ ಅಥವಾ ದಾಖಲಾತಿ ಪರಿಶೀಲನೆ ವೇಳೆ ಅನರ್ಹನೆಂದು ಸಾಬೀತಾದರೆ, ಆ ಹುದ್ದೆಯನ್ನು ಖಾಲಿ ಬಿಡುವಂತಿಲ್ಲ. ಬದಲಾಗಿ, ಮೆರಿಟ್ ಆಧಾರದ ಮೇಲೆ ಸಿದ್ಧಪಡಿಸಲಾದ ಹೆಚ್ಚುವರಿ ಪಟ್ಟಿಯಿಂದ ಜೇಷ್ಠತೆಯ ಆಧಾರದ ಮೇಲೆ ಮುಂದಿನ ಅಭ್ಯರ್ಥಿಗೆ ಅವಕಾಶ ನೀಡುವ ನಿಯಮವನ್ನು ಅಳವಡಿಸಲಾಗಿದೆ.

ಒಟ್ಟಿನಲ್ಲಿ, ಕೆಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಹೊಸ ನಿಯಮಗಳ ಬಗ್ಗೆ ಅರಿವು ಮೂಡಿಸಿಕೊಂಡು ಅಧ್ಯಯನದಲ್ಲಿ ತೊಡಗುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+