'ನಮೋ' ಎಂದರೆ ನರೇಂದ್ರ ಮೋದಿ ಅಲ್ಲ 'ನಮಗೆ ಮೋಸ': ಗುಂಡೂರಾವ್
ಬೆಂಗಳೂರು, ಫೆಬ್ರವರಿ 28: 'ನಮೋ' ಎಂದರೆ ನರೇಂದ್ರ ಮೋದಿ ಎಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಅದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು 'ನಮೋ' ಬೇರೆಯದೇ ಹೊಸ ಅರ್ಥ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು 'ನಮೋ' ಎಂದರೆ 'ನಮಗೆ ಮೋಸ' ಎಂದರ್ಥ ಎಂದು ವ್ಯಂಗ್ಯ ಮಾಡಿದ್ದಾರೆ. ದಾವಣಗೆರೆಯಲ್ಲಿ ರೈತ ಸಮಾವೇಶದಲ್ಲಿ ಮೋದಿ ಅವರು ಮಾತನಾಡಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಅವರು ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಮೋದಿ ಅವರು ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೂ ಸುಳ್ಳುಗಳನ್ನು ಹೇಳಿ ಸಾಕ್ಷಿವಿಲ್ಲದೆ ರಾಜ್ಯವನ್ನು ಭ್ರಷ್ಟ ಎಂದು ರಾಜ್ಯದ ಜನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.
ಮೋದಿ ಮತ್ತು ಅಮಿತ್ ಶಾ ಇಬ್ಬರೂ ಸಹ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದು ಬಿಟ್ಟು ಅಭಿವೃದ್ಧಿಯ ಬಗ್ಗೆ ಮಾತನಾಡಲಿ, ಸ್ವತಃ ಚೆಕ್ಕಿನಲ್ಲಿ ಲಂಚ ಪಡೆದು ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾಂಗ್ರೆಸ್ ಅನ್ನು ಭ್ರಷ್ಟ ಎನ್ನಲು ನಾಚಿಕೆ ಆಗಬೇಕು ಎಂದು ಅವರು ಹೀಗಳೆದರು.

ದ್ರೋಹಿಗಳಿಗೆ ಮೋದಿ ಬೆಂಬಲ
ನನ್ನನ್ನು ಪ್ರಧಾನಿ ಮಾಡಬೇಡಿ, ಚೌಕಿದಾರ (ಕಾವಲುಗಾರ)ನನ್ನಾಗಿ ಮಾಡಿ, ನಾನು ದೇಶದ ಸಂಪತ್ತಿನಮೇಲೆ ಯಾರೊಬ್ಬರ ಕಣ್ಣೂ ಬೀಳದಂತೆ ನೋಡಿಕೊಳ್ಳುತ್ತೇನೆ ಎಂದು ಮೋದಿ ಭಾಷಣ ಬಿಗಿದಿದ್ದರು. ಆದರೆ ಈಗ ಈ ಕಾವಲುಗಾರನೇ ದ್ರೋಹಿಗಳೊಂದಿಗೆ ಕೈ ಸೇರಿಸಿ ಅವರು ದೇಶದ ಹಣ ಲೂಟಿ ಹೊಡೆಯಲು ಸಹಾಯ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

'ನಮ್ಮ ಹಣ ನಮಗೆ ಕೊಡಿ'
ಕೇಂದ್ರ ಹಣ ಕೊಟ್ಟಿದೆ ಆದರೆ ರಾಜ್ಯ ಖರ್ಚು ಮಾಡಿಲ್ಲ ಎನ್ನುವ ಮೋದಿ ಅವರು ಮೊದಲು ಲೆಕ್ಕ ಕೊಡಲಿ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದರು. ಈವರೆಗೆ 92 ಸಾವಿರ ಕೋಟಿ ಕೊಟ್ಟಿದ್ದಾರೆ ಆದರೆ ನಮಗೆ 3 ವರ್ಷಗಳಲ್ಲಿ ಬರಬೇಕಾಗಿದ್ದು 1.2971 ಕೋಟಿ ರೂ. ನಮ್ಮ ಹಕ್ಕಿನ ಹಣವನ್ನೇ ಕೇಂದ್ರ ನಮಗಿನ್ನೂ ಕೊಟ್ಟಿಲ್ಲ ಆದರೂ 2 ಲಕ್ಷ ಅನುದಾನ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಾರೆ ಎಂದಿದ್ದಾರೆ.

ರಫೆಲ್ ಹಗರಣದ ಬಗ್ಗೆ ಮಾತನಾಡಿ
ರಾಜ್ಯಕ್ಕೆ ಬಂದಾಗೆಲ್ಲಾ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ ಅವರು ಹಣ ಕೊಳ್ಳೆ ಹೊಡೆದಿರುವ ನೀರವ್ ಮೋದಿ ಬಗ್ಗೆ ಮಾತನಾಡುವುದಿಲ್ಲ, ರಫೆಲ್ ಹಗರಣದ ಬಗ್ಗೆ ತುಟಿ ಬಿಚ್ಚುವುದಿಲ್ಲ, ವಿದೇಶಿ ಕಪ್ಪು ಹಣ ವಾಪಾಸ್ ತರುವ ಬಗ್ಗೆ ಮಾತನಾಡುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಸಾಕಷ್ಟು ತಿದ್ದುಪಡಿ ಆಗಬೇಕಿದೆ
ಬ್ಯಾಂಕುಗಳಲ್ಲಿ ಆಗುತ್ತಿರುವ ಹಗರಣ ತಡೆಯಲು ಕೇಂದ್ರ ತರಲು ಹೊರಟಿರುವ 'ಎಫ್‌ಆರ್‌ಡಿಎ' ಮಸೂದೆಗೆ ಕಾಂಗ್ರೆಸ್ ವಿರೋಧ ಇದ್ದು, ಈ ಮಸೂದೆ ಬ್ಯಾಂಕಿನ ವಿಶ್ವಾಸರ್ಹತೆಯನ್ನು ಇನ್ನಷ್ಟು ಹಾಳು ಮಾಡುತ್ತದೆ. ಈ ಕುರಿತು ಕಾಂಗ್ರೆಸ್ ಪಕ್ಷವು ಕೇಂದ್ರಕ್ಕೆ ಪತ್ರ ಬರೆದಿದ್ದು, ಮಸೂದೆಗೆ ಸಾಕಷ್ಟು ತಿದ್ದುಪಡಿ ಆಗಬೇಕಿದೆ ಎಂದು ಹೇಳಿದರು.

ಭ್ರಷ್ಟಾಚಾರಿಗಳ ಪಕ್ಕ ಕೂತು ಭ್ರಷ್ಟಾಚಾರದ ಮಾತು
ಪ್ರಧಾನಿ ಮೋದಿ ಅವರು ಜೈಲು ಹಕ್ಕಿ ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಚರಿಸಲು ದಾವಣಗೆರೆಗೆ ಬಂದಿದ್ದರು ಎಂದ ದಿನೇಶ್ ಗುಂಡೂರಾವ್ ಅವರು ಪರಮ ಭ್ರಷ್ಟರನ್ನು ಪಕ್ಕದಲ್ಲಿಯೇ ಕೂರಿಸಿಕೊಂಡು ಇನ್ನೊಬ್ಬರನ್ನು ಭ್ರಷ್ಟ ಎನ್ನುವ ಮೋದಿ ಅವರಿಗೆ ನೈತಿಕತೆ ಇಲ್ಲ ಎಂದರು.












Click it and Unblock the Notifications