ಡಿಕೆಶಿ ಬಗ್ಗೆ ಪಿಸು ಮಾತು; ಅಶೋಕ್ ಪಟ್ಟಣ್‌ಗೆ ಶಿಸ್ತು ಸಮಿತಿ ನೋಟಿಸ್
ಬೆಂಗಳೂರು, ಫೆಬ್ರವರಿ 02; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಪತ್ರಿಕಾಗೋಷ್ಠಿಯಲ್ಲಿ ಕುಳಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಗ್ಗೆ ಪಿಸುಮಾತು ಆಡಿದ್ದ ಮಾಜಿ ಶಾಸಕ ಅಶೋಕ್ ಪಟ್ಟಣ್‌ಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ತಪ್ಪಿಸುವ ಕುರಿತಾಗಿ ಅಶೋಕ ಪಟ್ಟಣ್ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಪಿಸುಮಾತು ಆಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಈ ಹಿನ್ನಲೆಯಲ್ಲಿ ಅಶಿಸ್ತಿನ ನಡವಳಿಕೆ ಎಂದು ಪರಿಗಣಿಸಿ ರೆಹಮಾನ್ ಖಾನ್ ನೇತೃತ್ವದ ಕೆಪಿಸಿಸಿ ಶಿಸ್ತು ಸಮಿತಿ ವಿವರಣೆ ಕೇಳಿ ಅಶೋಕ ಪಟ್ಟಣ್‌ಗೆ ನೋಟಿಸ್ ನೀಡಿದೆ. ಏಳು ದಿನದ ಒಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.

ನೋಟಿಸ್ ವಿವರ; ಪಕ್ಷದ ನಾಯಕರೂ, ಅನುಭವಿ ಶಾಸಕರೂ ಆದ ನೀವು ಖಾಸಗಿಯಾಗಿ ಮಾತನಾಡುವಾಗ ಕೆಪಿಸಿಸಿ ಅಧ್ಯಕ್ಷರ ಘನತೆಗೆ ಕುಂದುಂಟಾಗುವಂತೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಹಾನಿಯಾಗುವಂತಹ ವಿಚಾರಗಳನ್ನು ಮಾತನಾಡಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ತಾವು ಮಾತನಾಡಿರುವ ವಿಚಾರಗಳು ಸಂಪೂರ್ಣ ಆಧಾರರಹಿತವಾಗಿವೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ ಮತ್ತು ನಿರಾಕರಿಸುತ್ತದೆ. ತಮ್ಮ ಈ ವರ್ತನೆಯಿಂದ ಪಕ್ಷದ ಘನತೆ-ಗೌರವಕ್ಕೆ ಕುಂದುಂಟಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ತಮ್ಮ ನಡವಳಿಕೆ ಬಗ್ಗೆ ಏಳು ದಿನದಲ್ಲಿ ಸಮಾಜಾಯಿಷಿ ನೀಡಬೇಕು ಎಂದು ಈ ಮೂಲಕ ಸೂಚಿಸಲಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್‌ನಲ್ಲಿ ತಿಳಿಸಿದೆ.
ಅಶೋಕ್ ಪಟ್ಟಣ್ ಪ್ರತಿಕ್ರಿಯೆ; ಕೆಪಿಸಿಸಿ ನೀಡಿರುವ ನೋಟಿಸ್ ಬಗ್ಗೆ ಅಶೋಕ್ ಪಟ್ಟಣ್ ಪ್ರತಿಕ್ರಿಯೆ ನೀಡಿದ್ದಾರೆ, "ನೋಟಿಸ್‌ನಿಂದ ನಾನು ಬೆಚ್ಚಿ ಬಿದ್ದಿಲ್ಲ. 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ಯಾರಿಗೂ ಟಿಕೆಟ್ ಕೊಡಿಸುವಷ್ಟು ಮಟ್ಟಿಗೆ ಬೆಳೆದಿಲ್ಲ" ಎಂದು ಹೇಳಿದರು.
"ಅಂದು ಮಾತನಾಡಿದ್ದರಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಬೆಂಬಲಿಗರು ಬಂದಿದ್ದರು. ಅವರು ಹೇಳಿರುವುದನ್ನು ನಾನು ಹೇಳಿದೆ ಅಷ್ಟೇ. ಇದರಿಂದಾಗಿ ನನಗೆ ಏಕೆ ಟಿಕೆಟ್ ತಪ್ಪುತ್ತದೆ?" ಎಂದು ಪ್ರಶ್ನಿಸಿದರು.
"ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ನಾನು ಯುವ ಕಾಂಗ್ರೆಸ್ ಕಾಲದಿಂದಲೂ ಸ್ನೇಹಿತರು. ಅಂದು ನಾನು ಸಿದ್ದರಾಮಯ್ಯ ಬಳಿ ಪುಲಕೇಶಿ ನಗರದ ಕ್ಷೇತ್ರದಿಂದ ಬಂದ ಜನರ ಬಗ್ಗೆ ಮಾತನಾಡಿದೆ. ಅದರ ಹೊರತು ಬೇರೆ ಏನೂ ಮಾತನಾಡಿಲ್ಲ" ಎಂದು ಅಶೋಕ್ ಪಟ್ಟಣ್ ವಿವರಿಸಿದರು.
"ಪಕ್ಷಕ್ಕೆ ಧಕ್ಕೆ ತರುವ ಕೆಲಸ ನಾನು ಮಾಡಿಲ್ಲ. ನೋಟಿಸ್ ನೀಡುವ ಮುನ್ನ ನನ್ನ ಮಾತು ಕೇಳಬಹುದಿತ್ತು. ತಪ್ಪು ಗ್ರಹಿಕೆಯಿಂದ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಎರಡು ಮೂರು ದಿನದಲ್ಲಿ ಉತ್ತರ ನೀಡುವೆ" ಎಂದರು.
"ನಾನು ಕಟ್ಟಾ ಕಾಂಗ್ರೆಸಿಗ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಶಾಸಕರಾಗಿದ್ದರು. ನಾನು ಪ್ರಮಾಣಿಕವಾಗಿ ಕಾಂಗ್ರೆಸ್ ಪರವಾಗಿಯೇ ಇದ್ದೇನೆ. ಬಿಜೆಪಿ ಆಪರೇಷನ್ ಕಮಲ ನಡೆಸಿದಾಗ ನನಗೆ ಕೋಟ್ಯಾಂತರ ರೂಪಾಯಿ ಆಮಿಷ ಬಂದಾಗಲೂ ನಾನು ಪಕ್ಷಬಿಟ್ಟು ಹೋಗಿಲ್ಲ. ನಾನು ಹಿರಿಯ ಕಾಂಗ್ರೆಸಿಗ ನಾನು ಏನೂ ಎಂದು ಪಕ್ಷದಲ್ಲಿ ಎಲ್ಲರಿಗೂ ಗೊತ್ತು" ಎಂದು ಹೇಳಿದರು.
"ಮಾಧ್ಯಮದವರೇ ಅವರಿಗೊಂದು ನ್ಯಾಯ ನನಗೊಂದು ನ್ಯಾಯ ಎಂದು ಹೇಳುತ್ತಿವೆ. ನನಗೊಂದು ನ್ಯಾಯ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನಗೆ ಮಾತ್ರ ನೋಟಿಸ್ ಕೊಟ್ಟಿದಾರೆ ಅನ್ನೋದು ಏನಿಲ್ಲ. ತಪ್ಪು ಗ್ರಹಿಕೆಯಿಂದ ನೋಟೀಸ್ ಕೊಟ್ಟಿರಬೇಕು. ನಾನು ದೊಡ್ಡ ಲೀಡರ್ ಅಲ್ಲವೇ ಅಲ್ಲ. ನಾನು ಬೆಳಗಾವಿ ಜಿಲ್ಲೆ ರಾಮದುರ್ಗಾ ತಾಲೂಕಿಗೆ ಮಾತ್ರ ಸೀಮಿತ. ನಾನು ಬೆಳಗಾವಿಯ ದೊಡ್ಡ ಲೀಡರ್ ಅಲ್ಲ" ಎಂದರು.












Click it and Unblock the Notifications