ಕಾಂಗ್ರೆಸ್ ಪಾಳಯದಲ್ಲಿ ಸಂಪುಟ ವಿಸ್ತರಣೆ ಮಾತುಕತೆ
ಬೆಂಗಳೂರು, ಆ.14 : ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಡಿನೋಟಿಫಿಕೇಶನ್ ಪ್ರಕರಣಗಳ ಬಗ್ಗೆ ಚರ್ಚಿಸಲು ಆ.26ರಂದು ಕರ್ನಾಟಕ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ. ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಈ ಸಭೆಯ ನಡೆಯಲಿದ್ದು ಹಲವಾರು ಕುತೂಹಲಗಳನ್ನು ಹುಟ್ಟುಹಾಕಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಆ.26ರ ಮಂಗಳವಾರ ಸಮನ್ವಯ ಸಮತಿ ಸಭೆ ನಡೆಯಲಿದೆ. ಈಗಾಗಲೇ ಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದರಿಂದ ಸಭೆ ಮಹತ್ವಪಡೆದುಕೊಂಡಿದೆ.

ಸಮನ್ವಯ ಸಮಿತಿ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ದೆಹಲಿಗೆ ತೆರಳಿದ್ದು, ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ಕುರಿತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಚರ್ಚೆ ನಡೆಸಲಿದ್ದು, ಅವರ ಒಪ್ಪಿಗೆ ಪಡೆಯಲಿದ್ದಾರೆ. [ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪ್ರಸ್ತುತ ಐದು ಸ್ಥಾನಗಳು ಖಾಲಿ ಇವೆ. ಈ ಪೈಕಿ ಒಂದನ್ನು ಖಾಲಿ ಇಟ್ಟುಕೊಂಡು ನಾಲ್ಕನ್ನು ಮಾತ್ರ ಭರ್ತಿ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಸಂಪುಟ ಪುನಾರಚನೆ ಮಾಡುವ ಮಾತುಗಳು ಕೇಳಿಬರುತ್ತಿದ್ದು, ಯಾವ ಸಚಿವರ ಖಾತೆಗಳು ಬದಲಾವಣೆಯಾಗಲಿವೆ ಎಂಬ ಕುರಿತು ಸಮ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಆ.21ರಂದು ಮೂರು ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದ್ದು, ಅದರ ಫಲಿತಾಂಶ ಆ.25ರಂದು ಪ್ರಕಟಗೊಳ್ಳಲಿದೆ. ನಂತರ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರು ಸಮನ್ವಯ ಸಮತಿ ಸಭೆಗೂಮುನ್ನವೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. [ಉಪ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳು ಯಾರು?]
ಅಂದಹಾಗೆ ಕಾಂಗ್ರೆಸ್ ಸಮನ್ವಯ ಸಮತಿಯ ನೇತೃತ್ವವನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ವಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಮಿತಿಯ ಸಂಚಾಲಕರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಸೆಲ್ವ ಕುಮಾರ್, ಗೃಹ ಸಚಿವ ಕೆ.ಜೆ.ಜಾರ್ಜ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಮಿತಿಯ ಸದಸ್ಯರಾಗಿದ್ದಾರೆ.












Click it and Unblock the Notifications