ಕೊರಟಗೆರೆ: ಬರಕ ಗ್ರಾಮದಲ್ಲಿ ಚಂದ್ರಪೂಜೆ ಸಂಪ್ರದಾಯಕ್ಕೆ ಜೀವ, 9 ದಿನಗಳ ಸಂಭ್ರಮ

ಕೊರಟಗೆರೆ: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಕ ಗ್ರಾಮದಲ್ಲಿ ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿರುವ ಬೆಳದಿಂಗಳು ಅಥವಾ ತಿಂಗಳ ಮಾವನ ಪೂಜೆ ಎಂಬ ವಿಶಿಷ್ಟ ಸಂಪ್ರದಾಯ ಈ ವರ್ಷವೂ ಭಕ್ತಿ, ಸಂಸ್ಕೃತಿ ಮತ್ತು ಸಮೂಹ ಜೀವನದ ಸೊಗಡಿನಿಂದ ಅದ್ಧೂರಿಯಾಗಿ ನೆರವೇರಿತು. ಪ್ರಕೃತಿ, ಭಕ್ತಿ ಹಾಗೂ ಜನಪದ ಸಂಸ್ಕೃತಿಯ ಸಮನ್ವಯದಂತಿರುವ ಈ ಆಚರಣೆ ಇಡೀ ಗ್ರಾಮವನ್ನು ಒಗ್ಗೂಡಿಸುವ ಮಹೋತ್ಸವವಾಗಿ ರೂಪುಗೊಂಡಿತು.

ಒಂಭತ್ತು ದಿನಗಳ ಕಾಲ ನಡೆಯುವ ಈ ವಿಶಿಷ್ಟ ಆಚರಣೆಯಲ್ಲಿ ಮೊದಲ ಎಂಟು ದಿನಗಳು ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 12 ರವರೆಗೆ ಗ್ರಾಮಸ್ಥರು ಒಂದೇ ಸ್ಥಳದಲ್ಲಿ ಸೇರಿ ಬೆಳದಿಂಗಳ ರಂಗೋಲಿ ಬಿಡಿಸಿ, ಚಂದ್ರನ ಕುರಿತಾದ ಜನಪದ ಹಾಡುಗಳನ್ನು ಹಾಡಿದರು. ಒಂಬತ್ತನೇ ದಿನ ಮುಖ್ಯ ಪೂಜೆಯನ್ನು ನೆರವೇರಿಸಲಾಯಿತು.

Koratagere Baraka Village Chandra Pooja Festival

ಈ ಕಾರ್ಯಕ್ರಮಕ್ಕಾಗಿ ಪೂಜೆ ನಡೆಯುವ ಸ್ಥಳವನ್ನು ವಿಶೇಷವಾಗಿ ಸಿದ್ಧಪಡಿಸಲಾಗುತ್ತದೆ. ನೆಲವನ್ನು ಹಸುವಿನ ಸಗಣಿಯಿಂದ ಲೇಪಿಸಿ ಹಸಿರಾಗಿಸಿ, ಅದರ ಮೇಲೆ ರಾಗಿಹಿಟ್ಟಿನಿಂದ ಸುಂದರ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಚಂದ್ರ, ಸೂರ್ಯ, ನಕ್ಷತ್ರಗಳು, ಜಿಂಕೆ, ನವಿಲು ಸೇರಿದಂತೆ ಪ್ರಕೃತಿಯ ವಿವಿಧ ಜೀವಿಗಳನ್ನು ಚಿತ್ರಿಸಲಾಗುತ್ತದೆ. ಹೂಗಳಿಂದ ಅಲಂಕಾರ ಮಾಡಿ, ನಾಲ್ಕು ದಿಕ್ಕುಗಳಲ್ಲಿ ದೀಪಗಳನ್ನು ಹಚ್ಚಿ ಅದರ ಮಧ್ಯ ಕನ್ನಡಿ ಇಡಲಾಗುತ್ತದೆ.

ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿ, ಇಬ್ಬರು ಬಾಲಕರನ್ನು ಮದುವಣಿಗರಾಗಿ ಸಜ್ಜುಗೊಳಿಸಲಾಗುತ್ತದೆ. ಮದುಮಗನಾಗಿ ಒಬ್ಬ ಬಾಲಕ, ಮದುಮಗಳಾಗಿ ಮತ್ತೊಬ್ಬ ಬಾಲಕನಿಗೆ ಸೀರೆ ಉಡಿಸಿ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಊರ ದೇವಾಲಯದಿಂದ ನಾದಸ್ವರ, ತಮಟೆ, ಡೋಲುಗಳ ಸದ್ದಿನೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಗ್ರಾಮಸ್ಥರು, ಮಹಿಳೆಯರು, ಪುರುಷರು, ಸಂಬಂಧಿಕರು ಎಲ್ಲರೂ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

ಬೆಳದಿಂಗಳ ರಂಗೋಲಿ ಬರೆದಲ್ಲಿ ಸ್ಥಳಕ್ಕೆ ಮದುವಣಿಗರನ್ನು ಕೂರಿಸಿ, ಹಿರಿಯರ ಸಮ್ಮುಖದಲ್ಲಿ ಹೂಮಾಲೆ ಬದಲಾಯಿಸಿ ಸಾಂಕೇತಿಕವಾಗಿ ತಾಳಿ ಕಟ್ಟಿಸಲಾಗುತ್ತದೆ. ಮದುಮಗನನ್ನು "ಸೂರ್ಯ" ಎಂದು, ಮದುಮಗಳನ್ನು "ಚಂದ್ರಮ್ಮ" ಎಂದು ಕರೆದು, ಈ ವಿಶೇಷ ಲಗ್ನ ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಚಂದ್ರನ ಕುರಿತಾದ ಹಾಡುಗಳು ನಿರಂತರವಾಗಿ ಮೊಳಗುತ್ತಿರುತ್ತವೆ.

ಮಧ್ಯರಾತ್ರಿ ಚಂದ್ರನು ತಲೆಯ ಮೇಲೆ ಬಂದು ಅದರ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸಿಕೊಂಡಾಗ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಕಳಸವನ್ನು ಕದಡಿ, ಆಚರಣೆಯ ಭಾಗವಾಗಿ "ಕಳ್ಳ ಕಳಸ"ವನ್ನು ತೆಗೆದುಕೊಂಡು ಹೋಗುವ ಸಂಪ್ರದಾಯವೂ ನಡೆಯುತ್ತದೆ. ನಂತರ ಮದುವಣಿಗರ ಮೆರವಣಿಗೆಯನ್ನು ನಡೆಸಿ ಊರ ಮೂಡಣದ ದಿಕ್ಕಿನಲ್ಲಿರುವ ಬಾವಿಯಲ್ಲಿ "ಚಂದ್ರಮ್ಮನ ಸಾಗು" ಹಾಕಲಾಗುತ್ತದೆ.

ಈ ಒಂಭತ್ತು ದಿನಗಳ ಕಾರ್ಯಕ್ರಮದಲ್ಲಿ ಊರಿನ ಹೆಣ್ಮಕ್ಕಳೇ ಸಂಪೂರ್ಣ ನೇತೃತ್ವ ವಹಿಸಿಕೊಂಡಿದ್ದು ವಿಶೇಷ. ಸ್ಥಳೀಯವಾಗಿ ದೊರೆಯುವ ಕಾಳುಕಡಿ, ಸೊಪ್ಪು, ಕೊತ್ಕಾಯಿ (ಹಲಸಿನಕಾಯಿ) ಪಲ್ಯ, ಪಾಯಸ, ಬೂಂದಿ, ಹೆಸರುಬೇಳೆ, ಚಿತ್ರಾನ್ನ, ಹಪ್ಪಳ, ಅನ್ನ-ಸಾರು ಈ ವರ್ಷದ ಅಡುಗೆಯ ಭಾಗವಾಗಿದ್ದವು. ಸಾಮೂಹಿಕ ಭೋಜನದ ನಂತರ ಊಟದ ನಂತರ ಫಲತಾಂಬೂಲವನ್ನೂ ನೀಡುವುದು ವಿಶೇಷ.

ಈ ವರ್ಷದ ಆಚರಣೆಗೆ ಹಿರಿಯ ಮಹಿಳೆ ಸಿದ್ಧಲಿಂಗಜ್ಜಿ ಮಾರ್ಗದರ್ಶನ ನೀಡಿದ್ದರು. "ಅಲ್ಲಮಪ್ರಭುವಿನ ವಾರ ಬುಧವಾರ" ಎಂದು ಶರಣರನ್ನು ಆಹ್ವಾನಿಸುವ ಹಾಡುಗಳು ಗ್ರಾಮದಲ್ಲಿ ಭಕ್ತಿ ಭಾವವನ್ನು ಮೂಡಿಸಿದವು.

ಡಿಜಿಟಲ್ ಯುಗದಲ್ಲಿ ಟಿವಿ, ಮೊಬೈಲ್, ಧಾರಾವಾಹಿಗಳ ಮಧ್ಯೆ ಕಳೆದುಹೋಗುತ್ತಿರುವ ಜನಪದ ಸಂಸ್ಕೃತಿಗೆ ಈ ಆಚರಣೆ ಹೊಸ ಚೈತನ್ಯ ತುಂಬಿದಂತಾಯಿತು. ಯಾವುದೇ ಗಲಾಟೆ, ಜಗಳಗಳಿಲ್ಲದೆ ಶಾಂತಿಯುತವಾಗಿ ಕಾರ್ಯಕ್ರಮ ನಡೆಯಿತು. ಸಮೂಹ ಜೀವನದ ಸೌಂದರ್ಯ, ಸಹಬಾಳ್ವೆಯ ಮೌಲ್ಯಗಳನ್ನು ಜೀವಂತವಾಗಿಟ್ಟಿರುವ ಬರಕ ಗ್ರಾಮದ ಈ ಬೆಳದಿಂಗಳ ಆಚರಣೆ, ನಮ್ಮ ಹಳ್ಳಿಗಳ ಸಾಂಸ್ಕೃತಿಕ ಶ್ರೀಮಂತಿಕೆಗೆ ಕನ್ನಡಿಯಾಗಿದೆ.(ಬರಹ: ತುಳಸಿತನಯ ಚಿದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+