ನಮ್ಮ ಕ್ಲಿನಿಕ್‌ಗಳ ಕಾರ್ಯ ನಿರ್ವಹಣೆ ಅವಧಿಯಲ್ಲಿ ಬದಲಾವಣೆ
ಧಾರವಾಡ, ಅಕ್ಟೋಬರ್ 04; ಕರ್ನಾಟಕ ಸರ್ಕಾರ ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಅಥವ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಿದೆ. ನಮ್ಮ ಕ್ಲಿನಿಕ್‌ಗಳ ಕಾರ್ಯ ನಿರ್ವಹಣೆ ಸಮಯವನ್ನು ಜನರಿಗೆ ಅನುಕೂಲವಾಗುವಂತೆ ಬದಲಾವಣೆ ಮಾಡಲಾಗಿದೆ.
ಕೊಪ್ಪಳ ಮತ್ತು ಧಾರವಾಡದಲ್ಲಿ ಕಳೆದ ವರ್ಷದಿಂದ ಆರಂಭಿಸಿರುವ ನಮ್ಮ ಕ್ಲಿನಿಕ್‌ಗಳ ಕಾರ್ಯ ನಿರ್ವಹಣೆ ಅವಧಿ ಪರಿಷ್ಕರಣೆ ಮಾಡಲಾಗಿದೆ. ಧಾರವಾಡ ಮದಿಹಾಳದ ಮತ್ತು ಹುಬ್ಬಳ್ಳಿ ಎಸ್. ಎಂ. ಕೃಷ್ಣಾ ನಗರದ ಆಸ್ಪತ್ರೆಗಳ ಕಾರ್ಯನಿರ್ವಣೆ ಅವಧಿಯನ್ನು ಕೂಲಿ ಕಾರ್ಮಿಕರ, ಸಾರ್ವಜನಿಕರ ಅನುಕೂಲಕ್ಕಾಗಿ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರಿಂದ ಈ ಎರಡು ನಮ್ಮ ಕ್ಲಿನಿಕ್‌ಗಳ ಕಾರ್ಯ ನಿರ್ವಹಣೆಯ ಸಮಯ ಬದಲಾವಣೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪಾಟೀಲ ಶಶಿ ತಿಳಿಸಿದ್ದಾರೆ.
ಬದಲಾದ ಅವಧಿ ಮಾಹಿತಿ; ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ರಾಜ್ಯ ಸರ್ಕಾರವು ಧಾರವಾಡದಲ್ಲಿ 2, ಹುಬ್ಬಳ್ಳಿಯಲ್ಲಿ 2 ಮತ್ತು ನವಲಗುಂದ ಹಾಗೂ ಅಣ್ಣಿಗೇರಿ ಪಟ್ಟಣದಲ್ಲಿ ತಲಾ 1 ಸೇರಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 6 ನಮ್ಮ ಕ್ಲಿನಿಕ್ ಆಸ್ಪತ್ರೆಗಳು ನಡೆಯುತ್ತಿವೆ.
ಅಣ್ಣಿಗೇರಿ, ನವಲಗುಂದ, ಹುಬ್ಬಳ್ಳಿಯ ಬೈರಿದೇವರಕೋಪ್ಪ ಮತ್ತು ಧಾರವಾಡದ ಲಕ್ಷ್ಮಿಸೀಂಗನಕೇರಿಯಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಬೆಳಗ್ಗೆ 9 ರಿಂದ 4:30ರ ವೆರೆಗೆ ಕಾರ್ಯನಿರ್ವಹಿಸುತ್ತವೆ. ಧಾರವಾಡ ಮದಿಹಾಳದ ಮತ್ತು ಹುಬ್ಬಳ್ಳಿ ಎಸ್. ಎಂ. ಕೃಷ್ಣಾ ನಗರದ ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಬೆಳಗ್ಗೆ 8 ರಿಂದ 12 ಗಂಟೆವರೆಗೆ ಹಾಗೂ ಸಂಜೆ 4 ರಿಂದ 8 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಲಾಗಿದೆ.
ಚಿಕಿತ್ಸೆ ಅಗತ್ಯವಿರುವ ನಾಗರಿಕರೊಂದಿಗೆ ಕೂಲಿ ಕಾರ್ಮಿಕರಿಗೆ, ಕೃಷಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಸರ್ಕಾರದ ನಿರ್ದೇಶನದಂತೆ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಮಾಹಿತಿ; ನಮ್ಮ ಕ್ಲಿನಿಕ್‌ಗಳು ಇನ್ನು ಮುಂದೆ ಪ್ರತಿ ದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 4 ರಿಂದ ರಾತ್ರಿ 8 ಗಂಟೆಯವರೆಗೆ ಎರಡು ಹಂತದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ತಿಳಿಸಿದ್ದಾರೆ.
15ನೇ ಹಣಕಾಸು ಆಯೋಗದಡಿಯಲ್ಲಿ ನಗರ ಪ್ರದೇಶದಲ್ಲಿ ವಾಸಸಿಸುವ ಬಡ, ದುರ್ಬಲ, ಕೂಲಿ ಕಾರ್ಮಿಕರು ಮತ್ತು ದುಡಿಯುವ ವರ್ಗದ ಸಮುದಾಯಕ್ಕೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ್ನು ಒದಗಿಸುವ ಉದ್ದೇಶದಿಂದ ಮತ್ತು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ದುಡಿಯುವ ವರ್ಗದ ಜನರಿಗೆ ಹಾಗೂ ದಿನಗೂಲಿ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲು ಮತ್ತು ದೂರದ ರೆಫೆರಲ್ ಆಸ್ಪತ್ರೆಗಳಿಗೆ ತೆರಳುವುದನ್ನು ತಪ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಣೆಯ ಸಮಯದಲ್ಲಿ ಬದಲಾವಣೆ ಮಾಡುವ ಕುರಿತ ಆದೇಶದಂತೆ ಪ್ರಾಯೋಗಿಕವಾಗಿ ಈ ಸಮಯ ಪರಿಷ್ಕರಣೆ ಮಾಡಲಾಗಿದೆ.
ಕೊಪ್ಪಳದ ನಗರ ಆರೊಗ್ಯ ಮತ್ತು ಕ್ಷೇಮ ಕೇಂದ್ರ (ನಮ್ಮ ಕ್ಲಿನಿಕ್)ಗಳ ಸಮಯವನ್ನು ಪ್ರತಿ ದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ಮಧ್ಯಾಹ್ನ 4 ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸಲಿದ್ದು, ಈ ಬದಲಾದ ಈ ಸಮಯದಲ್ಲಿ ದೊರೆಯುವ ಆರೋಗ್ಯ ಸೇವೆಯನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications