ಮುಂದಿನ ಪ್ರಧಾನಿ: ಭವಿಷ್ಯ ನುಡಿದ ಕೋಡಿಮಠ ಶ್ರೀ
ಬಾಗಲಕೋಟೆ, ಜ 11: ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಭವಿಷ್ಯದ ಮೂಲಕ ಹೆಸರು ಗಳಿಸಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮುಂದಿನ ಪ್ರಧಾನಿ ಯಾರೆಂದು ಭವಿಷ್ಯ ನುಡಿದಿದ್ದಾರೆ.
2014ರಲ್ಲಿ ಇದೇ ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೋಡಿಶ್ರೀಗಳು, ದೇಶದ ಮುಂದಿನ ಪ್ರಧಾನಿಯಾಗಿ ಹಿರಿಯ ರಾಜಕೀಯ ಮುತ್ಸದ್ದಿಯೊಬ್ಬರು ಆಯ್ಕೆಯಾಗಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.
'ಮುತ್ತಿನಗಿಳಿ ಮುಪ್ಪಾಗಿ ಮುತ್ತಾಯಿತು' ಎಂದು ಒಗಟು ಭಾಷೆಯಲ್ಲಿ ಹೇಳುವ ಮೂಲಕ ವಯೋವೃದ್ದ ನಾಯಕರೊಬ್ಬರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆನ್ನುವ ಸುಳಿವು ನೀಡಿದ್ದಾರೆ.
ರಾಜ್ಯ ರಾಜಕಾರಣದ ಬಗ್ಗೆಯೂ ಚುಟುಕಾಗಿ ಭವಿಷ್ಯ ನುಡಿದ ಕೋಡಿಶ್ರೀಗಳು, ರಾಜ್ಯದಲ್ಲಿ ಸರಕಾರಕ್ಕೆ ಬಹುಮತವಿದ್ದರೂ ಅಸ್ಥಿರತೆ ಕಾಡುತ್ತಿದೆ. ಆದರೂ, ಸಿದ್ದು ಸರಕಾರಕ್ಕೆ ಸದ್ಯದ ಮಟ್ಟಿಗೆ ತೊಂದರೆಯಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಸರಕಾರಕ್ಕೆ ಕೋಡಿಶ್ರೀಗಳು ಈ ಹಿಂದೆ ಹೇಳಿದ್ದೇ ಬೇರೆ. ಸ್ಲೈಡಿನಲ್ಲಿ ನೋಡಿ...

ಸಿದ್ದರಾಮಯ್ಯ ಸರಕಾರಕ್ಕೆ ಸಂಕಟವಿದೆ ಅಂದಿದ್ರಲ್ಲಾ ಶ್ರೀಗಳೇ
ಗದಗದಲ್ಲಿ ಕಳೆದ ವರ್ಷ ಜೂನ್ ಮೂರರಂದು ಮಾತನಾಡುತ್ತಿದ್ದ ಶ್ರೀಗಳು, ರಾಜ್ಯದಲ್ಲಿ ನೂತನ ಸರಕಾರವೊಂದು ಅಧಿಕಾರಕ್ಕೆ ಬಂದಿದೆ. ಆರಂಭದಲ್ಲಿ ಅಪಶಕುನ ನುಡಿಯ ಬಾರದು ಎಂದು ಸುಮ್ಮನಿದ್ದೇನೆ. ಆದರೂ, ಸಿದ್ದರಾಮಯ್ಯ ಎಚ್ಚರಿಕೆಯಿಂದ ರಾಜ್ಯಭಾರ ಮಾಡಬೇಕು.

ಸಿದ್ದು ಸರಕಾರಕ್ಕೆ ಅಸ್ಥಿರತೆ ಕಾಡಲಿದೆ
ಸಿದ್ದು ಸರಕಾರಕ್ಕೆ ಬಹುಮತವಿದ್ದರೂ, ಅಸ್ಥಿರತೆ ಮತ್ತು ಅಭದ್ರತೆ ಕಾಡಲಿದೆ. ಜೊತೆಗೆ ಹಲವಾರು ಸಂಕಟಗಳನ್ನು ಎದುರಿಸ ಬೇಕಾಗುತ್ತದೆ. ಆದರೆ ಇದುವರೆಗೆ ಕಾಂಗ್ರೆಸ್ ಒಳಗಿನ ಭಿನ್ನಮತ ಹೊರತು ಪಡಿಸಿದರೆ ಸಿದ್ದರಾಮಯ್ಯ ರಾಜ್ಯಭಾರ ಮುಂದುವರಿಸಿ ಕೊಂಡು ಹೋಗುತ್ತಿದ್ದಾರೆ.

2020ರ ವರೆಗೆ ಸಮ್ಮಿಶ್ರ ಸರಕಾರ
ರಾಜ್ಯದಲ್ಲಿ ಏಕ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಒಮ್ಮೆ ಹೇಳಿದ್ದ ಶ್ರೀಗಳು, ಹಿಂದೊಮ್ಮೆ 2020ರ ವರೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಹೇಳಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಏಕ ಪಕ್ಷವಾಗಿ ಅಧಿಕಾರಕ್ಕೆ ಬಂತು.

ಮಳೆ ಚೆನ್ನಾಗಿ ಆಗಲಿದೆ, ಬೆಂಕಿ ಅನಾಹುತ ಹೆಚ್ಚಾಗಲಿದೆ
ಶ್ರೀಗಳು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಳೆ ಚೆನ್ನಾಗಿ ಬರಲಿದೆ ಮತ್ತು ದೇಶದಲ್ಲಿ ಬೆಂಕಿ ಅನಾಹುತ ಹೆಚ್ಚಾಗಲಿದೆ ಎಂದಿದ್ದರು. ಕಳೆದ ವರ್ಷ ರಾಜ್ಯಕ್ಕೆ ವರುಣನ ಕೃಪಾಕಟಾಕ್ಷ ಚೆನ್ನಾಗಿ ಇತ್ತು. ಮತ್ತು ಕಳೆದ ವರ್ಷ ಬೆಂಕಿ ಅವಘಡದ ಘಟನೆ ವಿಪರೀತವಾಗಿತ್ತು.

ಕೋಡಿಶ್ರೀಗಳ ಬಳಿ ಹೋಗುವವರು ಅಯೋಗ್ಯರು
ಕೋಡಿಮಠಕ್ಕೆ ಭೇಟಿ ನೀಡಿ ಶ್ರೀಗಳ ಬಳಿ ಹೋಗುವವರು ಅಯೋಗ್ಯರು. ಅನ್ನದಾಸೋಹ, ಅಕ್ಷರ ದಾಸೋಹ, ಪೂಜೆ, ಪುನಸ್ಕಾರ ಬಿಟ್ಟು ಕೋಡಿ ಶ್ರೀಗಳಿಗೆ ಸಿದ್ದು ಭವಿಷ್ಯ ನುಡಿಯುವ ಜರೂರತ್ತು ಇತ್ತೇ ಎಂದು ಕಾಂಗ್ರೆಸ್ ಹಿಂದುಳಿದ ವರ್ಗದ ಮುಖಂಡ ಶೇಷಗೌಡ ಟೀಕಿಸಿದ್ದರು.












Click it and Unblock the Notifications