Kiccha Sudeep: ಬೆಣ್ಣೆ ನಗರಿ ದಾವಣಗೆರೆ, ಕೋಟೆಗಳ ನಾಡು ಚಿತ್ರದುರ್ಗದಲ್ಲಿಂದು ಕಿಚ್ಚನ ಕಿಚ್ಚಿನ ಪ್ರಚಾರ
ಬೆಂಗಳೂರು ಏಪ್ರಿಲ್ 26: ಬಸವರಾಜ ಬೊಮ್ಮಾಯಿ ಮಾಮ ಪರ ನಟ ಸುದೀಪ್ ಕಳೆದ ಬಾರಿ ಹಾವೇರಿಯಲ್ಲಿ ಪ್ರಚಾರ ಮಾಡಿದ್ದರು. ಇಂದು ಮತ್ತೆ ಕಿಚ್ಚ ಸುದೀಪ್ ರಾಜ್ಯದ ಹಲವೆಡೆ ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ಬೆಣ್ಣೆ ನಗರಿ ದಾವಣಗೆರೆ, ಕೋಟೆಗಳ ನಾಡು ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಮೂರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ, ಒಟ್ಟು ಆರು ಅಭ್ಯರ್ಥಿಗಳ ಪರ ಅಭಿನವ ಚಕ್ರವರ್ತಿ ಮತಬೇಟೆ ನಡೆಸುತ್ತಾರೆ. ಈ ಮೂಲಕ ಕಿಚ್ಚ ಸುದೀಪ್ ಸ್ಟಾರ್ ಪ್ರಚಾರಕರ ಖದರ್ ತೋರಿಸಲಿದ್ದಾರೆ.
ಎಸ್‌ಟಿ ಮತಗಳನ್ನು ಸೆಳೆಯಲು ಬಿಜೆಪಿ ಸುದೀಪ್ ಮೊರೆ ಹೋಗಿದೆ. ಈಗಾಗಲೇ ಕಿಚ್ಚ ಸುದೀಪ್ ಪ್ರಚಾರಕ್ಕೆ ಬೇಕಾದ ಸಿದ್ದತೆಗಳು ನಡೆದಿದೆ. ಇಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಪರ ಬೆಳಗ್ಗೆ 9:30 ರಿಂದ 10:30 ವರೆಗೆ ರೋಡ್ ಶೋ ಮಾಡಲಿದ್ದಾರೆ.

ಬಳಿಕ ದಾವಣಗೆರೆ ಜಿಲ್ಲೆಗೆ ಕಿಚ್ಚ ಆಗಮಿಸುತ್ತಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಜಗಳೂರು ಮಾಯಕೊಂಡ ಬಿಜೆಪಿ ಅಭ್ಯರ್ಥಿ ಎಂ. ಬಸವರಾಜ್ ಪರ ಕಿಚ್ಚ ಪ್ರಚಾರ ಮಾಡಲಿದ್ದಾರೆ. ದಾವಣಗೆರೆ ಉತ್ತರ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜು ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಅಜಯ್ ಕುಮಾರ್ ಪರ ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ.
ಬಳಿಕ ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರ ಸುದೀಪ್ ಪ್ರಚಾರ ಮಾಡಲಿದ್ದಾರೆ. ಇಂದು ಒಟ್ಟು 3 ಜಿಲ್ಲೆಗಳ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಿಚ್ಚ ರೋಡ್ ಶೋ ಮೂಲಕ ಕ್ಯಾಂಪೇನ್ ಮಾಡಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಸುದೀಪ್ ಬಗ್ಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ ಮಾತಾಡಿದ್ದಾರೆ. ಸುದೀಪ್ ಹಾಗೂ ನಾನು ಒಳ್ಳೆಯ ಸ್ನೇಹಿತರು. ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸುವ ಮೊದಲು ಅವರು ನನ್ನೊಟ್ಟಿಗೂ ಕೂಡ ಚರ್ಚಿಸಿದ್ದರು ಎಂದು ರಮ್ಯಾ ಹೇಳಿದ್ದಾರೆ.
ಬಳಿಕ ಬಿಜೆಪಿ ಪರ ಸುದೀಪ್ ಪ್ರಚಾರದ ಬಗ್ಗೆ ರಮ್ಯಾ ಹಿತ ನುಡಿಗಳನ್ನು ಆಡಿದ್ದಾರೆ. ಸುದೀಪ್ ಪ್ರಚಾರ ಮಾಡುತ್ತಿರುವುದು ಅವರ ವೈಯಕ್ತಿಕ ವಿಚಾರ. ಬಿಜೆಪಿ ಅಷ್ಟೇ ಅಲ್ಲದೇ ಇತರೆ ಪಕ್ಷಗಳು ಕೂಡ ಸುದೀಪ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಸುದೀಪ್ ಕೂಡ ಬೇರೆ ಬೇರೆ ಪಕ್ಷಗಳ ಮುಖಂಡರ ಸಲಹೆ ಪಡೆದಿದ್ದರು. ಆದರೆ ಅವರಿಗೆ ಸಿಎಂ ಬೊಮ್ಮಾಯಿ ಅವರು ಬಹಳ ಆಪ್ತರು ಅವರನ್ನು ಬೊಮ್ಮಾಯಿ ಮಾಮ ಎಂದೇ ಸುದೀಪ್ ಕರೆಯುತ್ತಾರೆ. ಹಾಗಾಗಿ ಕೊನೆಗೆ ಸಿಎಂ ಪರವಾಗಿ ಅವರು ಪ್ರಚಾರಕ್ಕೆ ಇಳಿಯುವ ನಿರ್ಧಾರ ಮಾಡಿದರು ಎಂದು ರಮ್ಯಾ ಹೇಳಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಹಾಗೂ ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಇದ್ದ ಕೊನೆಯ ದಿನ ಕೂಡ ಪೂರ್ಣಗೊಂಡಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.












Click it and Unblock the Notifications