ಕಿಚ್ಚ ಸುದೀಪ್ ಮನಮುಟ್ಟುವ ಕೆಲಸ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕಿಯ ಭೇಟಿ!
ಮಕ್ಕಳ ಮನಸ್ಸು ನಿಷ್ಕಲ್ಮಶ, ಹೀಗಾಗಿಯೇ ಮಕ್ಕಳ ಪ್ರೀತಿ ಕೂಡ ನಿಷ್ಕಲ್ಮಶವಾಗೇ ಇರುತ್ತೆ. ಅದರಲ್ಲೂ ಸಿನಿಮಾ ಸ್ಟಾರ್ಸ್ ಅಂದ್ರೆ ಮಕ್ಕಳಿಗೆ ತುಂಬಾ ಇಷ್ಟ. ಹೀಗೆ ತನ್ನಿಷ್ಟದ ಸ್ಟಾರ್ ತಾನು ಇರುವ ಆಸ್ಪತ್ರೆಗೆ ಬಂದರೆ ಹೇಗಿರಬೇಡ? ಹೌದು ಹೀಗೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕಿ ಭೇಟಿ ಮಾಡಿದ್ದಾರೆ ನಟ ಕಿಚ್ಚ ಸುದೀಪ್. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಷ್ಟಕ್ಕೂ ಅಭಿಮಾನಿಗಳ ಬಾಯಲ್ಲಿ ಪ್ರೀತಿಯಿಂದ ಕಿಚ್ಚ ಎಂದು ಕರೆಸಿಕೊಳ್ಳುವ ಸುದೀಪ್ ಅವರು ತೆರೆ ಮುಂದೆ ಮಾತ್ರವಲ್ಲ, ತೆರೆ ಹಿಂದೆ ಕೂಡ ಸಮಾಜಮುಖಿ ಕೆಲಸ ಮಾಡುತ್ತಾ ಮಾದರಿಯಾಗಿದ್ದಾರೆ. ಇದೀಗ ತನ್ನ ಪುಟಾಣಿ ಅಭಿಮಾನಿಗೆ ಸರ್ಪ್ರೈಸ್ ಕೊಡುವ ಮೂಲಕ ಗಮನ ಸೆಳೆದಿದ್ದಾರೆ. ಹೀಗೆ ಕೋಟ್ಯಂತರ ಅಭಿಮಾನಿಗಳು ಸುದೀಪ್ ಭೇಟಿಗೆ ಕಾಯುತ್ತಾರೆ. ಆದರೆ ಇಂದು ದಿಢೀರ್ ತನ್ನ ಅಭಿಮಾನಿ ಇರುವ ಆಸ್ಪತ್ರೆಗೆ ಭೇಟಿ ನೀಡಿದ್ದರು ಸುದೀಪ್ ಅವರು. ಅಲ್ಲದೆ ನಟ ಸುದೀಪ್ ದಿಢೀರ್ ಬಂದಿದ್ದನ್ನು ನೋಡಿದ ಪುಟಾಣಿ ಅಭಿಮಾನಿ ಕೂಡ ಫುಲ್ ಖುಷ್ ಆಗೋದ್ರು.

ಪುಟಾಣಿ ಅಭಿಮಾನಿಗೆ ಕಿಚ್ಚ ಸಲಾಂ!
ಹೌದು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಾಕ್ಷಿ ಎಂಬ ಬಾಲಕಿಯನ್ನ ನಟ ಕಿಚ್ಚ ಸುದೀಪ್ ಇಂದು ಭೇಟಿ ಮಾಡಿದ್ದಾರೆ. ಬಾಲಕಿ ಸಾಕ್ಷಿ ಅಪ್ಪಟ ಕಿಚ್ಚ ಸುದೀಪ್‌ರ ಅಭಿಮಾನಿ. ಜೀವನದಲ್ಲಿ ಒಮ್ಮೆಯಾದ್ರೂ ತನ್ನ ನೆಚ್ಚಿನ ಸ್ಟಾರ್ ಭೇಟಿಯಾಗಬೇಕು ಎಂಬುದು ಈ ಬಾಲಕಿ ಸಾಕ್ಷಿಯ ಆಸೆ. ಬಾಲಕಿ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರಿಗೆ ಇಂದು ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಶೂಟಿಂಗ್ ನಡುವೆ ಹಾಗೂ ಬ್ಯುಸಿ ಷೆಡ್ಯೂಲ್ ಮಧ್ಯೆ ಒಂದಷ್ಟು ಸಮಯ ಬಿಡುವು ಮಾಡಿಕೊಂಡು ಆಸ್ಪತ್ರೆಗೆ ತೆರಳಿ ಪುಟಾಣಿ ಅಭಿಮಾನಿ ಜೊತೆ ಸಮಯ ಕಳೆದಿದ್ದಾರೆ.
ಮಗುವಿಗೆ ಸುದೀಪ್ ಆತ್ಮಿಯ ಅಪ್ಪುಗೆ
ಅಂದಹಾಗೆ ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸಾಕ್ಷಿ ಎಂಬ ತಮ್ಮ ಬಾಲ ಅಭಿಮಾನಿಯನ್ನ ಕಿಚ್ಚ ಸುದೀಪ್ ಇಲ್ಲೇ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಹಾಗೇ ಆಟೋಗ್ರಾಫ್ ನೀಡಿ ಪ್ರೀತಿಯಿಂದ ಅಭಿಮಾನಿಗೆ ಅಪ್ಪುಗೆ ಕೊಟ್ಟಿದ್ದಾರೆ. ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ ಸಾಕ್ಷಿ, ನನಗೆ ಸುದೀಪ್ ಸರ್ ಅಂದ್ರೆ ಇಷ್ಟ. 'ರನ್ನ' ಸಿನಿಮಾದ ಥಿತಲಿ ಹಾಡು ತುಂಬಾನೆ ಇಷ್ಟ ಎಂದಿದ್ದಾರೆ. ಹೀಗೆ ನಟ ಸುದೀಪ್ ಅವರನ್ನ ನೋಡಿ, ಬಾಲಕಿ ಖಷಿಯಾದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಒಟ್ನಲ್ಲಿ ನೆಚ್ಚಿನ ನಟನ ಸಮಾಜಮುಖಿ ಕಾರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಫ್ಯಾನ್ಸ್ ಘಟನೆ ಬಗ್ಗೆ ಭಾವುಕತೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲದೆ ನಟ ಸುದೀಪ್ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಆರೋಗ್ಯ ವಿಚಾರಿಸಿದ ವಿಡಿಯೋ ಕೂಡ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಅಂದರೆ ಜುಲೈ 28ಕ್ಕೆ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ರಿಲೀಸ್ ಆಗಿತ್ತು. ಕೆಲ ದಿನಗಳ ಹಿಂದಷ್ಟೆ ಸುದೀಪ್ ಅವರ ಹೊಸ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು.












Click it and Unblock the Notifications