KEA ಮಾಸ್ಟರ್ ಪ್ಲ್ಯಾನ್! ಪರೀಕ್ಷಾ ಅಕ್ರಮಕ್ಕೆ ಬ್ರೇಕ್ ಹಾಕಲು ಬಂತು 3 ಲೇಯರ್ OMR, ಎಲ್ಲ ಪರೀಕ್ಷೆಗಳಿಗೂ ವಿಸ್ತರಣೆ
ಬೆಂಗಳೂರು: ರಾಜ್ಯ ಸರ್ಕಾರಿ ಹಾಗೂ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ದುಶ್ಕೃತ್ಯ ತಡೆಗಟ್ಟಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ( KEA) ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಅನ್ನು ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಇತ್ತೀಚೆಗೆ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯೊಂದರಲ್ಲಿ 3 ಲೇಯರ್ ಓಎಂ ಆರ್ ಶೀಟ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಏನಿದು? ಹೊಸ ವ್ಯವಸ್ಥೆ, ಇದರಿಂದ ಏನೆಲ್ಲ ಪ್ರಯೋಜನ? ಇಲ್ಲಿದೆ ಮಾಹಿತಿ.
KEA ವತಿಯಿಂದ ಇತ್ತೀಚೆಗೆ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ( (KSRP)) ನೇಮಕಾತಿ ಪರೀಕ್ಷೆ ನಡೆದಿದ್ದು, ಅದರಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಟ್ರಿಪಲ್-ಲೇಯರ್ಡ್ ಓಎಂಆರ್ ಶೀಟ್‌ಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಈ ಮೂಲಕ ಪರೀಕ್ಷಾ ಅಕ್ರಮ ತಡೆಗೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು 'ದಿ ಹಿಂದು' ವರದಿ ಮಾಡಿದೆ.

ಮೂರು ಪದರ OMR ಶೀಟ್ ಯಾಕೆ?
ಈ ಓಎಂ ಆರ್ ಶೀಟ್‌ನಲ್ಲಿ ಮೂರು ಪದರಗಳು ಇರುತ್ತವೆ. ಎಂದಿನಂತೆ ಪರೀಕ್ಷೆ ಬಳಿಕ ಮುಖ್ಯ ಶೀಟ್ ಅನ್ನು ಕೆಇಎಗೆ ಸಲ್ಲಿಸಲಾಗುತ್ತದೆ. ಎರಡನೇ ಓಎಂಆರ್ ಪ್ರತಿ ವಿದ್ಯಾರ್ಥಿಗಳ ಇಟ್ಟುಕೊಳ್ಳುತ್ತಾರೆ. ಇದೀಗ ಹೊಸ ವ್ಯವಸ್ಥೆಯಡಿ ಮೂರನೇ ಪ್ರತಿಯನ್ನು ಪರೀಕ್ಷೆಗಳು ನಡೆಯುವ ಆಯಾ ಡಿಸಿಗಳ (ಜಿಲ್ಲಾಧಿಕಾರಿಗಳ) ಕಚೇರಿಯಲ್ಲಿ ಸ್ಟ್ರಾಂಗ್ ರೂಂನಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದರಿಂದ ದುರಾಲೋಚನೆ ಇರುವವರು ಎರಡು ಕಡೆಗೆ ಅಕ್ರಮ ಎಸಗಲು ಸಾಧ್ಯವಾಗದಂತೆ ಮಾಡಲಾಗಿದೆ. ಈ ತ್ರಿಲೇಯರ್ ಓಎಂಆರ್ ಶೀಟ್ ಪಾರದರ್ಶಕ ನೇಮಕಾತಿಗೆ ಪೂರಕವಾಗಿದೆ.
ಸದ್ಯಕ್ಕೆ ಹೊಸ ತ್ರಿಲೇಯರ್ ಓಎಂಆರ್ ಶೀಟ್ ಪರೀಕ್ಷಾ ವ್ಯವಸ್ಥೆ KSRP ನೇಮಕಾತಿ ಪರೀಕ್ಷೆಯಲ್ಲಿ ಮಾತ್ರವೇ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇತರ ನೇಮಕಾತಿ ಪರೀಕ್ಷೆಗಳಿಗೂ ವಿಸ್ತರಣೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ.
ರಾಜ್ಯದಲ್ಲಿ ಯಾವೊಂದು ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವುದೇ ಇಲ್ಲವೆನೋ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಸದ್ಯದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪ್ರಕರಣಗಳನ್ನು ಗಮನಿಸಬಹುದು. ಕೆಪಿಎಸ್‌ಸಿ ಯ ವಿವಿಧ ನೇಮಕಾತಿ ಅಕ್ರಮಗಳ ಬಗ್ಗೆ ಸೂಕ್ತ ತನಿಕೆ ನಡೆಸುವಂತೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಮಾತ್ರವಲ್ಲದೇ ಇಡಿ, ಸಿಐಡಿ ಸಹ ಈ ಪರೀಕ್ಷಾ ಹಗರಣ/ಅಕ್ರಮ ವಿರುದ್ಧ ತನಿಖೆ ನಡೆಸಿವೆ.
ಓಎಂಆರ್ ಟ್ಯಾಂಪರಿಂಗ್ ಆರೋಪ ಅಧಿಕ
ಈ ಎಲ್ಲ ಪ್ರಕರಣಗಳಲ್ಲಿ ಓಎಂಆರ್ ಶೀಟ್‌ಗಳ ಟ್ಯಾಂಪರಿಂಗ್ ಆರೋಪಗಳು ಹೆಚ್ಚಾಗಿರುವುದು ಗೊತ್ತಾಗಿದೆ. ಅಕ್ರಮ ಮಾಡಲೆಂದರೆ ಪರೀಕ್ಷೆಗೂ ಮುನ್ನ ಕಾನೂನು ಬಾಹಿರವಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ. ಅದರಂತೆ ಕೆಲವು ಅಭ್ಯರ್ಥಿಗಳು ತಮ್ಮ ಓಎಂಆರ್ ಶೀಟ್‌ಗಳಲ್ಲಿ ವೃತ್ತ ತುಂಬದೇ ಖಾಲಿ ಬಿಟ್ಟಿರುತ್ತಾರೆ. ಅನ್ಯ ಮಾರ್ಗಗಳ ಮೂಲಕ ಆ ವೃತ್ತಗಳನ್ನು ಭರ್ತಿ ಮಾಡುವ ಚಾಲಾಕಿಗಳು ಹಣ ಪಡೆದು ಆ ಅಭ್ಯರ್ಥಿಗಳಿಗೆ ಹುದ್ದೆ ನೀಡಲು ಮುಂದಾಗುತ್ತಾರೆ. ಕೊನೆಗೆ ಸಿಕ್ಕುಹಾಕಿಕೊಂಡು, ಇತರ ವಿದ್ಯಾರ್ಥಿಗಳು/ಅಭ್ಯರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕುತ್ತಾರೆ. ಇಂಥದ್ದೆ ಪ್ರಕರಣಗಳು ಮೇಲಿಂದ ಮೇಲೆ ಮರುಕಳಿಸಿವೆ.
ಈವರೆಗೆ ರಾಜ್ಯದಲ್ಲಿ ಕೆಪಿಎಸ್‌ಸಿ ಹಾಗೂ ಕೆಇಎ ಸಂಸ್ಥೆಗಳು ಎರಡು ಲೇಯರ್‍ನ ಓಎಂಆರ್ ಶೀಟ್ ಬಳಕೆ ಮಾಡುತ್ತಿವೆ. ಇಲ್ಲಿ ಮೊದಲ ಪ್ರತಿ ಪರೀಕ್ಷಾ ಸಂಸ್ಥೆಗಳು ಸ್ವೀಕರಿಸಿದರೆ, ಮತ್ತೊಂದು ಅಭ್ಯರ್ಥಿಗಳಲ್ಲಿ ಉಳಿಯುತ್ತಿತ್ತು. ಕೆಪಿಎಸ್‌ಸಿ ಪ್ರಕರಣಗಳ ಟ್ಯಾಂಪರಿಂಗ್ ಗಮನಿಸಿದೇ ಪ್ರಾಧಿಕಾರವು ಮೂರು ಲೇಯರ್ ಇರುವ ಓಎಂಆರ್ ಶೀಟ್ ವ್ಯವಸ್ಥೆ ಜಾರಿಗೆ ಮುಂದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.


Click it and Unblock the Notifications
