ಕಾರವಾರ ವಿಮಾನ ನಿಲ್ದಾಣ; ಸಿದ್ದರಾಮಯ್ಯಗೆ ಮಾಜಿ ಸಚಿವರ ಪತ್ರ
ಬೆಂಗಳೂರು, ಸೆಪ್ಟೆಂಬರ್ 22; ಮಲೆನಾಡು ಶಿವಮೊಗ್ಗದ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದೆ. ಈಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಾಗರಿಕ ವಿಮಾನ ನಿಲ್ದಾಣ ಸ್ಥಾಪಿಸಿ, ಅಭಿವೃದ್ಧಿಪಡಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆಯಲಾಗಿದೆ.
ಹಳಿಯಾದ ಶಾಸಕ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ವಿಮಾನ ನಿಲ್ದಾಣ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದು, ಈ ಪ್ರದೇಶದಲ್ಲಿ ವಿಮಾನಯಾನ ಪ್ರಾರಂಭವಾದರೆ ಸಾಗರೋತ್ಪನ್ನ ಕೈಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಕ್ಷೇತ್ರಗಳೂ ಸೇರಿದಂತೆ ವಿವಿಧ ವಲಯದ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಾಣಿಜ್ಯೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಆರ್ಥಿಕ ಸಂಪನ್ಮೂಲದ ಸುಧಾರಣೆಯೊಂದಿಗೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಯು ಸದೃಢವಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಸಮಾಲೋಚಿಸಿ ತುರ್ತು ನಿರ್ಧಾರ ಕೈಗೊಂಡು ಕಾರವಾರ ನಾಗರಿಕ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪತ್ರದ ವಿವರ; ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 2010ರಿಂದ ಅಭಿವೃದ್ಧಿಪಡಿಸುತ್ತಿರುವ ಸೀ-ಬರ್ಡ್ ನೌಕಾನೆಲೆಯ ಯೋಜನೆಯು 2025ರಲ್ಲಿ ಪೂರ್ಣಗೊಳ್ಳಲಿದ್ದು, ಇದು ಏಷ್ಯಾದಲ್ಲೇ ಅತಿ ದೊಡ್ಡ ನೌಕಾನೆಲೆಯಾಗಿ ಪರಿವರ್ತನೆಯಾಗಲಿದೆ. ಈ ಯೋಜನೆಯಲ್ಲಿ ರಕ್ಷಣಾ ಬಳಕೆಗಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕಾಮಗಾರಿಯೂ ಸಹ ಒಳಗೊಂಡಿದೆ.
ಯೋಜನೆಯ ಭಾಗವಾಗಿ ನಾಗರಿಕ ವಿಮಾನಯಾನ ಉಪಯೋಗಕ್ಕಾಗಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರವು ರಕ್ಷಣಾ ಇಲಾಖೆಯನ್ನು ಕೋರಿದ್ದು, ಇದಕ್ಕಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗಾಗಲೇ ಮಂಜೂರಾಗಿರುವ ರೂ. 27 ಕೋಟಿಗಳ ಜೊತೆಗೆ ಹೆಚ್ಚುವರಿಯಾಗಿ ರೂ. 55 ಕೋಟಿಗಳನ್ನು ಭೂಸ್ವಾಧೀನ ವೆಚ್ಚಕ್ಕಾಗಿ ಬಿಡುಗಡೆ ಮಾಡುವಂತೆ ಕೋರಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿರುವುದಾಗಿ ತಿಳಿದು ಬಂದಿರುತ್ತದೆ.
ಈ ವಿಮಾನ ನಿಲ್ದಾಣದಲ್ಲಿ ಏರ್‌ಬಸ್-320 ವಿಮಾನ ಇಳಿಯಲು ಹಾಗೂ ಹಾರಾಟ ಮಾಡಲು ಅನುವಾಗುವಂತೆ ರನ್‌ವೇ ಅನ್ನು ಸುಮಾರು 3000 ಮೀಟರ್‌ರವರೆಗೆ ವಿಸ್ತರಿಸಬೇಕಾದ ಅವಶ್ಯಕತೆ ಇದ್ದು, ವಿಸ್ತರಿತ ರನ್‌ವೇಯ ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವಂತೆ ರಕ್ಷಣಾ ಇಲಾಖೆ ಮನವಿ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಾಗರಿಕ ವಿಮಾನ ನಿಲ್ದಾಣ ಸ್ಥಾಪಿಸುವುದು ಜಿಲ್ಲೆಯ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದು, ಈ ಪ್ರದೇಶದಲ್ಲಿ ವಿಮಾನಯಾನ ಪ್ರಾರಂಭವಾದರೆ ಸಾಗರೋತ್ಪನ್ನ ಕೈಗಾರಿಕೆ, ಪ್ರವಾಸೋದ್ಯಮ, ಮೀನುಗಾರಿಕೆ, ತೋಟಗಾರಿಕೆ ಕ್ಷೇತ್ರಗಳೂ ಸೇರಿದಂತೆ ವಿವಿಧ ವಲಯದ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಾಣಿಜ್ಯೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ದಕ್ಷಿಣ ಗೋವಾದಲ್ಲಿದ್ದ ನಾಗರಿಕ ವಿಮಾನ ನಿಲ್ದಾಣವು ಸುಮಾರು 55 ಕಿ. ಮೀ, ದೂರವಿರುವ ಮೋಪಾಗೆ ಸ್ಥಳಾಂತರಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಗೋವಾದ ನಾಗರಿಕರು ವಿಮಾನಯಾನಕ್ಕಾಗಿ ಸಮೀಪದ ಕಾರವಾರ ವಿಮಾನ ನಿಲ್ದಾಣವನ್ನು ಆಶ್ರಯಿಸುವ ಸಾಧ್ಯತೆ ಹೆಚ್ಚಾಗಿದೆ.
ಪ್ರಸ್ತುತ, ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳಿಗಾಗಿ ಭೂಸ್ವಾಧೀನದ ವೆಚ್ಚವನ್ನು ಭರಿಸುವುದರ ಜೊತೆಗೆ ನಿರ್ಮಾಣ ವೆಚ್ಚದಲ್ಲಿ ಶೇ. 50ರಷ್ಟು ಭರಿಸುತ್ತಿದೆ. ಅಲ್ಲದೆ, ಶಿವಮೊಗ್ಗ, ವಿಜಯಪುರ, ಹಾಸನ, ರಾಯಚೂರುಗಳಲ್ಲಿ ಭೂಸ್ವಾಧೀನದ ವೆಚ್ಚ ಹಾಗೂ ವಿಮಾನ ನಿಲ್ದಾಣದ ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಸದರಿ ವಿಮಾನ ನಿಲ್ದಾಣ ನಿರ್ಮಾಣದ ಅಭಿವೃದ್ಧಿಗಾಗಿ ವಿಸ್ತರಿತ ರನ್‌ವೇ ನಿರ್ಮಾಣ ವೆಚ್ಚ ಭರಿಸುವ ಬಗ್ಗೆ ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಠಪಡಿಸಬೇಕಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಕ್ಷಣ ಮಾಹಿತಿ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸದರಿ ರನ್‌ವೇ ನಿರ್ಮಾಣದ ಭಾಗಶ: ವೆಚ್ಚವನ್ನಾದರೂ ಭರಿಸುವ ಭರವಸೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದಲ್ಲಿ, ಕಾರವಾರದಲ್ಲಿ ವಿಮಾನಯಾನ ಸೇವೆ ಪ್ರಾರಂಭವಾಗಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಂತಾಗುತ್ತದೆ ಹಾಗೂ ಜಿಲ್ಲೆಯ ಸಾರ್ವಜನಿಕರ ಬಹುದಿನದ ಬೇಡಿಕೆ ಈಡೇರಿಸಿದಂತಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಜನ ಸೀಬರ್ಡ್, ನೌಕಾನೆಲೆ ಹಾಗೂ ಇತರ ಹಲವಾರು ಯೋಜನೆಗಳಿಗಾಗಿ ತ್ಯಾಗ ಮಾಡಿರುತ್ತಾರೆ. ಈಗ ನಾಗರೀಕ ವಿಮಾನ ನಿಲ್ದಾಣದ ಸೌಲಭ್ಯ ಜಿಲ್ಲೆಗೆ ದೊರಕದೇ ಹೋದಲ್ಲಿ ಜನತೆ ಅವಕಾಶ ವಂಚಿತರಾಗಿ, ಅಭಿವೃದ್ಧಿ ಕನಸಾಗಿಯೇ ಉಳಿಯಬಹುದಾಗಿದೆ. ಈ ಅಂಶಗಳ ಬಗ್ಗೆ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರೊಂದಿಗೆ ಸಮಾಲೋಚಿಸಿ ತುರ್ತು ನಿರ್ಧಾರ ಕೈಗೊಂಡು ಕಾರವಾರ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಆದ್ಯತೆ ಮೇಲೆ ಕ್ರಮ ವಹಿಸುವಂತೆ ತಮ್ಮನ್ನು ಕೋರುತ್ತೇನೆ ಎಂದು ಆರ್. ವಿ. ದೇಶಪಾಂಡೆ ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications