ಸಂಸತ್ ಭದ್ರತಾ ಲೋಪ ಪ್ರಕರಣ: ಕರ್ನಾಟಕದ ಮಾಜಿ ಟಾಪ್ ಪೋಲೀಸ್ ಪುತ್ರನ ಬಂಧನ!
ದೆಹಲಿ ಡಿಸೆಂಬರ್ 21: ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಪೋಲೀಸ್ ಪುತ್ರನನ್ನು ಬಂಧಿಸಲಾಗಿದೆ. ಸಾಯಿಕೃಷ್ಣ ಜಗಲಿ ಬಂಧಿತ ಆರೋಪಿಯಾಗಿದ್ದಾರೆ.
ಕಳೆದ ವಾರ ಸಂಸತ್ತಿನಲ್ಲಿ ನಡೆದ ಭಾರೀ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗನಾಗಿರುವ ಕರ್ನಾಟಕದ ಇಂಜಿನಿಯರ್ ನನ್ನು ದೆಹಲಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಾಗಲಕೋಟೆಯ ಅವರ ಮನೆಯಿಂದ ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ರಾಷ್ಟ್ರ ರಾಜಧಾನಿಗೆ ಕರೆತರಲಾಗುತ್ತಿದೆ.

ಸಾಯಿಕೃಷ್ಣ ಜಗಲಿ, ಲೋಕಸಭೆಯ ಸಭಾಂಗಣಕ್ಕೆ ನುಗ್ಗಿ ಬಣ್ಣದ ಹೊಗೆ ಎಸೆದ ಇಬ್ಬರಲ್ಲಿ ಒಬ್ಬರಾದ ಮನೋರಂಜನ್ ಡಿ ಅವರ ಸ್ನೇಹಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮನೋರಂಜನ್ ಅವರು ಈಗ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಸೇರಿದ್ದಾರೆ. ಮೂಲಗಳ ಪ್ರಕಾರ ಸಾಯಿಕೃಷ್ಣ ಮತ್ತು ಮನೋರಂಜನ್ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಯಾಚ್ ಮೇಟ್ ಆಗಿದ್ದರು. ಸಂಸತ್ತಿನ ಒಳನುಗ್ಗಿದ ವ್ಯಕ್ತಿ ವಿಚಾರಣೆ ವೇಳೆ ಸಾಯಿಕೃಷ್ಣ ಎಂದು ಹೆಸರಿಸಿದ್ದಾನೆ ಎಂದು ವರದಿಯಾಗಿದೆ.
ಇಂಜಿನಿಯರ್ ಆಗಿರುವ ಸಾಯಿಕೃಷ್ಣ ಅವರು ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿಯವರ ಪುತ್ರ. ಇವರು ಬಾಗಲಕೋಟೆಯ ತಮ್ಮ ಮನೆಯಲ್ಲಿ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದರು. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರ ಸಹೋದರಿ ಸ್ಪಂದ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ದೆಹಲಿ ಪೊಲೀಸರು ಬಂದಿದ್ದು ನಿಜ. ನನ್ನ ಸಹೋದರನನ್ನು ಪ್ರಶ್ನಿಸಲಾಗಿದೆ. ಈ ವಿಚಾರಣೆಗೆ ನಾವು ಸಂಪೂರ್ಣವಾಗಿ ಸಹಕರಿಸಿದ್ದೇವೆ. ಸಾಯಿಕೃಷ್ಣ ಯಾವುದೇ ತಪ್ಪು ಮಾಡಿಲ್ಲ. ಅವರು ಮತ್ತು ಮನೋರಂಜನ್ ರೂಮ್‌ಮೇಟ್‌ಗಳಾಗಿದ್ದರು. ಈಗ ನನ್ನ ಸಹೋದರ ಮನೆಯಿಂದಲೇ ಕೆಲಸ ಮಾಡುತ್ತಾನೆ." ಎಂದು ಸ್ಪಂದ ಹೇಳಿದ್ದಾರೆ.
ಕಳೆದ ಬುಧವಾರ ಸಂಸತ್ತಿನಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಈ ಆರೋಪಿಗಳು ಮಣಿಪುರದ ಅಶಾಂತಿ, ನಿರುದ್ಯೋಗ ಮತ್ತು ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ತಮ್ಮ ಉದ್ದೇಶವಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೂ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಲೋಕಸಭೆಗೆ ಅತಿಕ್ರಮ ಪ್ರವೇಶ ಮಾಡಿದ ಮನೋರಂಜನ್ ಮತ್ತು ಸಾಗರ್ ಶರ್ಮಾ, ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ಬಳಸಿದ ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್, ಭದ್ರತಾ ಉಲ್ಲಂಘನೆಯ ಮಾಸ್ಟರ್ ಮೈಂಡ್ ಎಂದು ನಂಬಲಾದ ಲಲಿತ್ ಝಾ ಮತ್ತು ಜಾಗೆ ಸಹಾಯ ಮಾಡಿದ ಮಹೇಶ್ ಕುಮಾವತ್ ಸೇರಿದ್ದಾರೆ.












Click it and Unblock the Notifications