Karnataka Rain Alert: ರಾಜ್ಯದ 14 ಜಿಲ್ಲೆಗಳಲ್ಲಿ ರಣಮಳೆ ಮುನ್ಸೂಚನೆ, ಆರೆಂಜ್ & ಯೆಲ್ಲೋ ಅಲರ್ಟ್
ಬೆಂಗಳೂರು, ಸೆಪ್ಟಂಬರ್ 28: ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಅಕ್ಟೋಬರ್ 04ರವರೆಗೆ ಭಾರೀ ಮಳೆ ಮುಂದುವರಿಯಲಿದೆ. ಈ ಪೈಕಿ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಜೋರು ಮಳೆ ಅಬ್ಬರಿಸಲಿದೆ. ಇವತ್ತು 14 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೆಪ್ಟಂಬರ್ 30ರವರೆಗೆ ಹೊತ್ತಿಗೆ ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಮಳೆ ತಗ್ಗಿ, ಒಣಹವೆ ಉಂಟಾಗುವ ನಿರೀಕ್ಷೆ ಇದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಬದಲಾವಣೆ, ವೈಪರೀತ್ಯಗಳಲ್ಲಿ ಒಂದು ಕಡೆ ತೀವ್ರಗೊಳ್ಳಲಿದೆ. ಅದು ಸೆಪ್ಟಂಬರ್ 30ರ ವೇಳೆಗೆ ಚಂಡಮಾರುತವಾಗಿ ಬದಲಾದರು ಆಗಬಹುದೆಂದು ಊಹಿಸಲಾಗಿದೆ. ಈ ಬಗ್ಗೆ ಶೀಘ್ರವೇ ಇನ್ನಷ್ಟು ಅಪ್ಡೇಟ್ ಸಿಗಲಿದೆ. ಸದ್ಯ ಕರ್ನಾಟಕದ ಮಟ್ಟಿಗೆ ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವೆಡೆ ಸಾಧಾರಣದಿಂದ ಭಾರಿ ಹಾಗೂ ಅತ್ಯಧಿಕ ಮಳೆ ನಿರೀಕ್ಷೆ ಇದೆ ಎಂದು ಭಾನುವಾರ ವರದಿಯಲ್ಲಿ ತಿಳಿಸಲಾಗಿದೆ.

14 ಜಿಲ್ಲೆಗಳಿಗೆ ಭಾರೀ ಮಳೆ ಅಲರ್ಟ್
ಇಂದು ಮತ್ತು ನಾಳೆ (ಸೆಪ್ಟಂಬರ್ 28 & 29) ರಂದು ಹಲವು ಜಿಲ್ಲೆಗಳಿಗೆ ಭಾರೀ ಮಳೆ ಆಗಲಿದೆ. ಇಂದು 14 ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ. ಅದರಲ್ಲಿ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳಿಗೆ "ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಇನ್ನೂ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿ ವಿವಿಧೆಡೆ ಹಗುರ ಮಳೆ?
ಸೋಮವಾರ ಕರಾವಳಿ ಹಾಗೂ ಉತ್ತರ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ನಂತರ ಒಳನಾಡು ಜಿಲ್ಲೆಗಳಲ್ಲಿ ಮಳೆ ತಗ್ಗಲಿದೆ. ಕರಾವಳಿ ಭಾಗದಲ್ಲಿ ಮುಂದುವರಿಯಲಿದೆ. ಉಳಿದಂತೆ ಹಾವೇರಿ, ಧಾರವಾಡ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರ, ಕೋಲಾರ, ರಾಮನಗರ, ಮೈಸೂರು, ಚಾಮರಾಜನಗರ, ಕಾರವಾರ, ಶಿವಮೊಗ್ಗ ಭಾಗದಲ್ಲಿ ತುಂತುರು ಮಳೆ ಸಾಧ್ಯತೆ ಇದೆ. ಇದರ ಹೊರತು ರಾಜ್ಯಕ್ಕೆ ಗಂಭೀರ ಸ್ವರೂಪದ ಯಾವುದೇ ಮಳೆ ಮುನ್ಸೂಚನೆ ಇಲ್ಲ.
ಬೆಂಗಳೂರಿನಲ್ಲಿ ಆಗಾಗ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ ಇದೆ. ಸದ್ಯಕ್ಕೆ ಭಾರೀ ಮಳೆ ಮುನ್ಸೂಚನೆ ಇಲ್ಲ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.












Click it and Unblock the Notifications