ಕರ್ನಾಟಕದಲ್ಲಿ ಕಾರ್ಮಿಕರಿಗೆ ಕನಿಷ್ಟ ವೇತನ ಪರಿಷ್ಕರಣೆ: ಸರ್ಕಾರದಿಂದ ಮಹತ್ವದ ನಿರ್ಧಾರ
ಕರ್ನಾಟಕ ಸರ್ಕಾರವು ಕನಿಷ್ಟ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕನಿಷ್ಟ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯು ಈಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿನ ಅಂಶಗಳು ಕೇಂದ್ರ ಸರ್ಕಾರದ ವೇತನ ಸಂಹಿತೆಗೆ ಅನುಗುಣವಾಗಿದೆಯೇ ಎನ್ನುವುದನ್ನು ಪರಿಶೀಲನೆ ಮಾಡುವುದಕ್ಕೆ ಸಚಿವ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಲಾಗಿದೆ.
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದು, ಸಚಿವರಾದ ಎಂ. ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ವಿಜಯಾನಂದ ಕಾಶಪ್ಪನವರ್ ಹಾಗೂ ಎಚ್.ಸಿ ಬಾಲಕೃಷ್ಣ ಅವರು ಸದಸ್ಯರಾಗಿದ್ದಾರೆ.

Karnataka Workers: ಕಾರ್ಮಿಕ ಕನಿಷ್ಟ ವೇತನ
ಇನ್ನು ಕರ್ನಾಟಕ ಸರ್ಕಾರವು ಮೇ 22, 2026 ರಂದು ಕಾರ್ಮಿಕರ ಕನಿಷ್ಟ ವೇತನವನ್ನು ಪರಿಷ್ಕರಿಸಿ ಹೊಸ ಆದೇಶ ಹೊರಡಿಸಿತ್ತು. ವೇತನ ನಿರ್ಣಯಕ್ಕಾಗಿ ಮೂರು ಹೊಸ ವಲಯಗಳನ್ನು ರಚಿಸಲಾಗಿತ್ತು. ಅದರಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ವಲಯ-3ರಲ್ಲಿ ಕನಿಷ್ಟ ವೇತನವು 19,300 ರೂ. ಹಾಗೂ ಕೌಶಲ್ಯಯುತ ಕಾರ್ಮಿಕರಿಗೆ 31,100 ರೂಪಾಯಿಯ ವರೆಗೆ ವೇತನ ಪರಿಷ್ಕರಿಸಲಾಗಿತ್ತು. ಇದೀಗ ಉಪ ಸಮಿತಿ ರಚಿಸಲಾಗಿದೆ.
ನೂತನ ಉಪ ಸಭಾಧ್ಯಕ್ಷ ಮಂಕಾಳ ವೈದ್ಯಗೆ ಅಭಿನಂದನೆ
ಸರ್ವಾನುಮತದಿಂದ ವಿಧಾನಸಭೆಯ ನೂತನ ಉಪ ಸಭಾಧ್ಯಕ್ಷರಾಗಿ ಮಂಕಾಳ ವೈದ್ಯ ಅವರು ಆಯ್ಕೆಯಾಗಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಉಪ ಸಭಾಧ್ಯಕ್ಷ ಮಂಕಾಳ ವೈದ್ಯ ಅವರನ್ನು ಅಭಿನಂದಿಸಿ ಮಾತನಾಡಿದರು. ಮಂಕಾಳ್ ವೈದ್ಯ ಅವರು ರಾಜಕೀಯ ಅಥವಾ ಅನುಕೂಲಸ್ಥ ಕುಟುಂಬದಿಂದ ಬಂದವರಲ್ಲ, ಸಾಮಾನ್ಯ ಹಿಂದುಳಿದ ಸಮುದಾಯದಿಂದ ಬಂದವರು. ಅವರಿಗೆ ರಾಜಕಾರಣಕ್ಕೆ ಬರಬೇಕು ಎಂಬ ಕಲ್ಪನೆ ಇತ್ತೋ ಇಲ್ಲವೋ ಗೊತ್ತಿಲ್ಲ. ಮೀನುಗಾರಿಕೆ ಉದ್ಯಮವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಅವರದ್ದು. ಜಿಲ್ಲಾ ಪಂಚಾಯತ್ ಸದಸ್ಯನಾಗಿ ರಾಜಕೀಯಕ್ಕೆ ಕಾಲಿಟ್ಟು, ಆ ಬಳಿಕ ಮಂತ್ರಿಯಾಗಿ ಇಂದು ಉಪ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.
ಅವರ ರಾಜಕೀಯ ಜೀವನವನ್ನು ನೋಡುವುದಾದರೆ, 2014ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಸೇರಿಸಿಕೊಂಡೆವು. ಅವರಿಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟೆವು. 2023ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಕಂಡರು. ಕಳೆದ ಸಚಿವ ಸಂಪುಟದಲ್ಲಿ ಮೀನುಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೊಬ್ಬ ಉತ್ತಮ ಸಚಿವರಾಗಿದ್ದರು ಎಂದಿದ್ದಾರೆ.
ಮುಂದುವರಿದು ಮಂಕಾಳ್ ವೈದ್ಯ ಅವರು ಸ್ನೇಹಜೀವಿ. ಯಾರನ್ನು ದ್ವೇಷ ಭಾವನೆಯಿಂದ, ಶತ್ರು ಭಾವನೆಯಿಂದ ನೋಡುವಂತಹ ಮನಸ್ಥಿತಿ ಅವರಲಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಇಂದು ಅವರನ್ನು ಉಪ ಸಭಾಧ್ಯಕ್ಷ ಸ್ಥಾನಕ್ಕೆ ಇಡೀ ಸದನ ಒಮ್ಮತದಿಂದ ಆಯ್ಕೆ ಮಾಡಿದೆ. ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ. ಸದನವನ್ನು ನಡೆಸುವುದರಲ್ಲಿ ಸಭಾಧ್ಯಕ್ಷರಿಗೆ ಅವರು ಸಹಕಾರವನ್ನು ಕೊಡುತ್ತಾರೆ ಎಂದು ಅವರು ತಿಳಿಸಿದರು.


Click it and Unblock the Notifications
