Karnataka rain: ರಾಜ್ಯದಲ್ಲಿ ಒಂದು ವಾರಪೂರ್ತಿ ಗುಡುಗು ಸಹಿತ ಮಳೆ ಅಬ್ಬರ ನಿರೀಕ್ಷೆ
ಬೆಂಗಳೂರು, ಸೆಪ್ಟಂಬರ್ 20: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಆಗಾಗ ಮಳೆ ಆಗುತ್ತಿದೆ. ಈ ಪೈಕಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಎಚ್ಚರಿಕೆ ಕೊಡಲಾಗಿದೆ. ಒಟ್ಟಾರೆ ಮುಂದಿನ ಒಂದು ವಾರದ ರಾಜ್ಯದ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಪ್ಟಂಬರ್ 27ರವರೆಗೆ ರಾಜ್ಯದಲ್ಲಿ ಜೋರು ಮಳೆ ಸಂಭವಿಸಲಿದೆ. ಕೆಲವು ದಿನಗಳಿಂದ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಹ ಜಿಟಿ ಜಿಟಿ ಮಳೆ ದಾಖಲಾಗುತ್ತಿದೆ. ಇದೇ ವಾತಾವರಣ ಮುಂದುವರಿಯಲಿದ್ದು, ಒಂದು ವಾರ ಮಳೆ ಆರ್ಭಟಿಸಲಿದೆ. ಈ ಪೈಕಿ ಕರಾವಳಿ, ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ.

ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆ ನಾಳೆ ಶುಕ್ರವಾರ (ಸೆಪ್ಟಂಬರ್ 21) ರಂದು ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಬರಲಿದ್ದು, ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದರೊಂದಿಗೆ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರದಲ್ಲಿ ಕೆಲವು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ನೆನ್ನೆ ಮಂಗಳವಾರ ಸಹ ಅಲ್ಲಲ್ಲಿ ಉತ್ತಮ ಮಳೆ ಆಗಿದೆ. ಈ ನಗರದೊಂದಿಗೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಹಾಗೂ ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ,ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತಿ ಜೋರು ಮಳೆ ಮುಂದಿನ ಒಂದು ವಾರ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಳನಾಡಿನಲ್ಲಿ ಆಗಾಗ ಮಳೆ ಸಿಂಚನ
ಬರಗಾಲದ ಭೀತಿಯನ್ನು ರಾಜ್ಯದ ಅನೇಕ ಜಿಲ್ಲೆಗಳು ಎದುರಿಸಿವೆ. ಈ ಪೈಕಿ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ಕಂಡು ಬಂದಿತ್ತು. ಆಗಾಗ ಎಲ್ಲ ಜಿಲ್ಲೆಗಳಲ್ಲಿ ಮಳೆ ಆಗುತ್ತಿರುವುದರಿಂದ ಕಳೆದ ಸೋಮವಾರ ಒಂದು ದಿನ ಬಿಟ್ಟರೆ ಉಳಿದೆಲ್ಲ ದಿನವು ಮೋಡ ಕವಿದ ವಾತಾವರಣವೇ ಕಂಡು ಬಂದಿದೆ. ಹೀಗಾಗಿ ತಾಪಮಾನ ಕಡಿಮೆ ಆಗಿದ್ದು, ಇದು ಸೆಪ್ಟಂಬರ್ 27ರ ವರೆಗೆ ಮುಂದುವರಿಯಲಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಗೋಕರ್ಣದಲ್ಲಿ 9 ಸೆಂಟಿ ಮೀಟರ್ ಮಳೆ ದಾಖಲಾಗಿದೆ.ಇದರೊಂದಿಗೆ ಕುಮಟಾ, ಅಂಕೋಲಾದಲ್ಲಿ ತಲಾ 6 ಸೆಂಟಿ ಮೀಟರ್, ಉಳಿದಂತೆ ಉತ್ತರ ಕನ್ನಡ, ಉಡುಪಿ, ತುಮಕೂರು, ಗಂಗಾವತಿ, ಹೊಸಪೇಟೆ, ಚಿಕ್ಕಮಗಳೂರು ಜಿಲ್ಲೆಗಳ ಹಾಗೂ ಇನ್ನಿತರ ಕಡೆಗಳಲ್ಲಿ ಸಾಧಾರಣವಾಗಿ ಮಳೆ ಆಗಲಿದೆ.
ಬೆಂಗಳೂರು ನಗರದಲ್ಲಿ ಮುಂದಿನ ಐದಾರು ದಿನಗಳ ಕಾಲ ಉತ್ತಮ ಮಳೆ ಆಗಲಿದೆ. ಮಂಗಳವಾರ ಸಾಧಾರಣವಾಗಿ ಮಳೆ ಬಿದ್ದಿದೆ. ಗರಿಷ್ಠ ತಾಪಮಾನದಲ್ಲಿ ಇಳಿಕೆ ಕಂಡು ಬರುತ್ತಿದೆ. ಇದೇ ವಾತಾವರಣ ನಗರದಲ್ಲಿ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications