Karnataka Weather: ಇನ್ನೆರಡು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ!
ಎಲ್‌ನಿನೊ ಕಾರಣದಿಂದಾಗಿ ರಾಜ್ಯದಲ್ಲಿಆಗಸ್ಟ್ ತಿಂಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.
ಬುಧವಾರ ರಾಜ್ಯದ ಮೈಸೂರು, ಬಾಗಲಕೋಟೆ, ಹಾಸನ, ಕೊಪ್ಪಳ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ. ಗುರುವಾರ ಮತ್ತು ಶುಕ್ರವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಿದೆ.

ಚಾಮರಾಜನಗರ, ಕೊಪ್ಪಳ, ರಾಯಚೂರು, ಮೈಸೂರು, ಬಾಗಲಕೋಟೆ, ಹಾಸನ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ, ಬೆಂಗಳೂರು ನಗರ, ಶಿವಮೊಗ್ಗ, ಗದಗ, ವಿಜಯನಗರ, ಬಳ್ಳಾರಿ, ಚಿಕ್ಕಮಗಳೂರು, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಬೆಳಗಾವಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬುಧವಾರ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕೊತ್ತೆಗಾಲದಲ್ಲಿ 84 ಮಿಮೀ ಮಳೆಯಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಗುರುವಾರ, ಶುಕ್ರವಾರ ಕೂಡ ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಕ್ಕೆ ಉತ್ತಮ ಮಳೆ
ಆಗಸ್ಟ್‌ನಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟ ಬಳಿಕ ಸೆಪ್ಟೆಂಬರ್ ಮಳೆ ನಿರ್ಣಾಯಕವಾಗಿದೆ. ಈಗಾಗಲೇ ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಸೆಪ್ಟೆಂಬರ್ ನಲ್ಲಿ ಉತ್ತಮ ಮಳೆಯಾದರೆ ಮಾತ್ರ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ. ಕೃಷಿ ಬೆಳೆಗಳಿಗೆ ಇಲ್ಲವಾದರೂ, ಕುಡಿಯುವ ನೀರಿಗೆ ಅಭಾವ ಆದರೂ ಕಡಿಮೆಯಾಗಲಿದೆ. ಒಂದು ವೇಳೆ ಸೆಪ್ಟೆಂಬರ್ ಮಳೆ ಕೂಡ ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.
ಭಾರತೀಯ ಹವಾಮಾನ ಇಲಾಖೆ ಸೆಪ್ಟೆಂಬರ್ ತಿಂಗಳ 4 ವಾರಗಳ ಮಳೆ ಮುನ್ಸೂಚನೆ ನೀಡಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಶುಭ ಸುದ್ದಿ ನೀಡಿದೆ. "ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಮಳೆಯ ಪುನಶ್ಚೇತನ ಉತ್ತಮವಾಗಿದೆ. ಆಗಸ್ಟ್ ತಿಂಗಳಲ್ಲಿ ಮಳೆಯ ಕೊರತೆಯ ನಂತರ ಕರಾವಳಿ ಕರ್ನಾಟಕ, ಮಲೆನಾಡು, ಕಾವೇರಿ ಜಲಾನಯನ ಪ್ರದೇಶಗಳು ಮತ್ತು ಒಳಭಾಗಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ" ಎಂದು ಹೇಳಿದೆ.
ಮೊದಲನೇ ವಾರ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ಹೇಳಿದೆ. ಎರಡನೇ ವಾರದಲ್ಲಿ ಕರಾವಳಿ ಕರ್ನಾಟಕ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನನ ಇಲಾಖೆ ಮುನ್ಸೂಚನೆ ನೀಡಿದೆ.
ಮೂರನೇ ವಾರ ಕರಾವಳಿ ಕರ್ನಾಟಕಕ್ಕೆ ಸಾಮಾನ್ಯ ಮಳೆಯಾದರೆ, ಸೆಪ್ಟೆಂಬರ್ ಕೊನೆಯ ವಾರ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹೇಳಿದೆ.












Click it and Unblock the Notifications