Heavy Rain: ಕರ್ನಾಟಕ ಕರಾವಳಿಗೆ ಶುರುವಾಯ್ತು ಸಂಕಷ್ಟ: ಮೀನುಗಾರರಿಗೆ ಎಚ್ಚರಿಕೆ ಸಂದೇಶ
ಬೆಂಗಳೂರು, ಡಿಸೆಂಬರ್ 03: ರಾಜ್ಯ, ಹೊರ ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಚಂಡಮಾರುತ 'ಫೆಂಗಲ್' ನದ್ದೆ ಸದ್ದು ಜೋರಾಗಿದೆ. ಈ ಚಂಡಮಾರುತ ತಮಿಳುನಾಡು, ಕೇರಳ ಕರಾವಳಿ ಭಾಗದಲ್ಲಿ ನೆಲೆಗೊಂಡಿದ್ದು, ಕರ್ನಾಟಕದ ಮೇಲೂ ತನ್ನ ಪ್ರಭಾವ ಬೀರಿದೆ. ಹೀಗಾಗಿ ಕರ್ನಾಟಕ ಕರಾವಳಿ ಭಾಗಕ್ಕೆ, ಇಲ್ಲಿನ ಜಿಲ್ಲೆಗಗಳು ಹಾಗೂ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ. ಕರಾವಳಿ ಭಾಗದಲ್ಲಿ ಗಾಳಿ ವೇಗ ಮಂಗಳವಾರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯ ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆ ಪ್ರಕಾರ, ಪುದಚೇರಿ ಹಾಗೂ ಕೇರಳ ಕರಾವಳಿ ಭಾಗದಿಂದ ಪೂರ್ವ ಅರಬ್ಬಿ ಸಮುದ್ರದತ್ತ ವ್ಯಾಪಕ ಗಾಳಿ ಬೀಸುತ್ತಿದೆ. ಈ ಗಾಳಿಯ ವೇಗದ ತೀವ್ರತೆ ಏರಿಕೆ ಆಗಿದೆ. ಮಂಗಳವಾರ ಪ್ರತಿ ಗಂಟೆಗೆ ಗಾಳಿಯು 35 ಕಿಲೋ ಮೀಟರ್‌ನಿಂದ ಇದು 45 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಸಂಜೆ ಹೊತ್ತಿಗೆ ಕರಾವಳಿ ತೀರ ಪ್ರದೇಶಗಳಲ್ಲಿ ಗಾಳಿಯ ವೇಗ ಗರಿಷ್ಠ 55-60 ಕಿಲೋ ಮೀಟರ್ ವೇಗದಲ್ಲಿ ಜೋರಾಗಿ ಬೀಸುವ ಸಾಧ್ಯತೆ ಇದೆ. ಇದರಿಂದ ಭಾರೀ ಮಳೆ ಸಹ ನಿರೀಕ್ಷಿಸಲಾಗಿದೆ.

ಈ ಕಾರಣದಿಂದ ಮೀನುಗಾರರಿಗೆ ಹವಾಮಾನ ಇಲಾಖೆಯು ಎಚ್ಚರಿಕೆ ಸಂದೇಶ ರವಾನಿಸಿದೆ. ಈಗಾಗಲೇ ಸಮುದ್ರಮಟ್ಟದಲ್ಲಿ ಸೈಕ್ಲೋನ್ ಗಾಳಿಯ ಅಬ್ಬರದ ವಾತಾವರಣ ನಿರ್ಮಾಣವಾಗಿದೆ. ಚಂಡಮಾರುತ ಫೆಂಗಲ್ ಆರ್ಭಟ ಮುಂದುವರೆದಿದ್ದು, ದುರ್ಬಲಗೊಳ್ಳುವ ಮುನ್ಸೂಚನೆ ಇನ್ನೂ ಸಿಕ್ಕಿಲ್ಲ.
ಹೀಗಿರುವಾಗ ಜೋರು ಗಾಳಿ ಬೀಸುವುದರಿಂದ ಸಮುದ್ರದಲ್ಲಿ ದೈತ್ಯ ಅಲೆಗಳು ಬೀಸುತ್ತವೆ. ದೊಡ್ಡ ದೊಡ್ಡ ಅಲೆಗಳು ದಡಕ್ಕೆ ಬಂದು ಅಪ್ಪಳಿಸುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಮೀನುಗಾರಿಕೆ ನಂಬಿಕೊಂಡು ಬದುಕು ಸಾಗಿಸುವ ಮೀನುಗಾರರು ಸಮುದ್ರಕ್ಕೆ ಇಳಿದರೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ.
ಈ ಕಾರಣದಿಂದ ಕರ್ನಾಟಕ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರು ಮುಂದಿನ ಎರಡು ದಿನ ಸಾಗರಕ್ಕೆ ಮೀನುಗಾರಿಕೆಗಾಗಿ ಇಳಿಯದಂತೆ ಐಎಂಡಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತನ್ನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬಿದ್ದ ಮಳೆ
ಕಳೆದ ಎರಡ ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ಚಂಡಮಾರುತ ಪ್ರಭಾವದಿಂದ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ, ಕಳೆದ 24 ಗಂಟೆಗಳಲ್ಲಿ ಅಂದರೆ, ಮಂಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 26 ಸೆಂಟಿ ಮೀಟರ್, ಮಂಗಳೂರಲ್ಲಿ 19, ಪಣಂಬೂರು 18, ಮಂಗಳೂರು ಎಪಿ ಆಬ್ಸಿ 16, ಉಡುಪಿ ಜಿಲ್ಲೆಯ ಕಾರ್ಕಳ 15, ಉಡುಪಿ ನಗರ 14, ಕೋಟ 13, ದಕ್ಷಿಣ ಕನ್ನಡ ಜಿಲ್ಲೆ ಮಣಿಯಲ್ಲಿ 5, ಪುತ್ತೂರು ಮತ್ತು ಸುಳ್ಯದಲ್ಲಿ ತಲಾ 5ಸೆಂಟಿ ಮೀಟರ್, ಧರ್ಮಸ್ಥಳ ಮತ್ತು ಬೆಳ್ತಂಗಡಿಯಲ್ಲಿ ತಲಾ 4, ಉತ್ತರ ಕನ್ನಡದ ಗೋಕರ್ಣ, ಗೇರಸೊಪ್ಪ ಹಾಗೂ ಕುಂದಾಪುರದಲ್ಲಿ 3 ಸೆಂಟಿ ಮೀಟರ್ ಮಳೆ ಆಗಿದೆ ಎಂದು ಮಂಗಳವಾರ ಐಎಂಟಿ ವರದಿ ಮಾಹಿತಿ ನೀಡಿದೆ.
ಮೂರು ದಿನ ಮಳೆ ಅಬ್ಬರ
ಮುಂದಿನ ಮೂರರಿಂದ ಐದು ದಿನಗಳ ವರೆಗೆ ರಾಜ್ಯದ ಕರಾವಳಿ ಸೇರಿದಂತೆ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆಗಾಗ ಹಗುರ ಮಳೆ, ಮಬ್ಬು ವಾತಾವರಣ ಕಂಡು ಬರಲಿದೆ. ಕೆಲವು ಜಿಲ್ಲೆಗಳಲ್ಲಿ ಒಣಹವೆ ಕಂಡು ಬರಲಿದೆ ಎಂಬ ಮುನ್ಸೂಚನೆ ಇದೆ.












Click it and Unblock the Notifications