ವಾಯುಭಾರ ಕುಸಿತ ಪರಿಣಾಮ ಶೀತಗಾಳಿ ನಡುವೆ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ
Karnataka Weather: ರಾಜ್ಯದ ಬಹುತೇಕ ಭಾಗಗಳಲ್ಲಿ ದಟ್ಟ ಮಂಜು, ಭೀಕರ ಚಳಿ ವಾತಾವರಣ ಮುಂದುವರೆದಿದೆ. ಈ ನಡುವೆ ಬಂಗಾಳಕೊಲ್ಲಿಯಲ್ಲಿ ವಾಯುಭಾರತ ಕುಸಿತ ಪರಿಣಾಮ ಮುಂದಿನ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 11) ಬೆಳಗ್ಗೆ ದಟ್ಟ ಮಂಜು, ಚಳಿ ಜೊತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ನಗರದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಈಗಾಗಲೇ ಶನಿವಾರ ಇಲ್ಲಿ ಕೆಲವೆಡೆ ತುಂತುರು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಮಳೆ?: ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಹಲವು ದಿನಗಳವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ಚಳಿ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದೆ.
ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ಚಳಿ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವಿಪರೀತ ಚಳಿ ಇರಲಿದ್ದು, ಈ ಹಿನ್ನೆಲೆ ಯೆಲ್ಲೋ ಅಲರ್ಟ್ ಅನ್ನು ಸಹ ಘೋಷಣೆ ಮಾಡಲಾಗಿದೆ.
ಯೆಲ್ಲೋ ಅಲರ್ಟ್: ಭಾರೀ ಶೀತಗಾಳಿ ಪರಿಣಾಮ ಭಾನುವಾರ ಬೀದರ್, ಕಲಬುರಗಿ, ಧಾರವಾಡ ಹಾಗೂ ವಿಜಯಪುರ ಜಿಲ್ಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಉಳಿದಂತೆ ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಮಾನ್ಯ ಶೀತಗಾಳಿ ಪ್ರಮಾಣ ಇರಲಿದ್ದು, ಒಣಹವೆ ಮುಂದುವರೆಯಲಿದೆ ಎಂದು ತಿಳಿಸಿದೆ.
ಹಾಗೆಯೇ ರಾಜ್ಯದ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಜನವರಿ14ರ ವರೆಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಶೀತಗಾಳಿ ಮುಂದುವರೆಯಲಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಈಗಾಗಲೇ ಭಾರೀ ಚಳಿಗಾಳಿ ಜೊತೆ ಬೆಂಗಳೂರಿನ ಹಲವೆಡೆ ಮಳೆ ಸುರಿದಿರುವ ಬಗ್ಗೆ ವರದಿ ಆಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿಗೆ ಇಳಿಕೆ ಆಗಿದೆ. ಹಗಲಿನ ವೇಳೆಯಲ್ಲೂ ತಾಪಮಾನ ಕುಸಿತ ಆಗದ್ದು, ಮೋಡ ಮುಸಕಿದ ವಾತಾವರಣ ನಿರ್ಮಾಣ ಮುಂದುವರೆದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ತುಂತುರು ಮಳೆ ಆಗುತ್ತಿದೆ. ಅಲ್ಲದೆ, ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸಹ ಜಿನುಗು ಮಳೆ ಆಗಿದೆ. ಮುಂದಿನ ಹಲವು ದಿನಗಳವರೆಗೂ ಇದೇ ರೀತಿಯ ವಾತಾವರಣ ಇರಲಿದೆ ಎನ್ನುವ ಮುನ್ಸೂಚನೆಯನ್ನ ನೀಡಿದೆ.












Click it and Unblock the Notifications