ಕೆಎಸ್‌ಆರ್‌ಟಿಸಿ ಪ್ರಯಾಣ ದರ ಇಳಿಕೆ, ಸಚಿವರ ಸುಳಿವು
ಬೆಳಗಾವಿ, ಡಿ.17 : ಪ್ರತಿಪಕ್ಷ ಮತ್ತು ಜನರ ಒತ್ತಾಯಕ್ಕೆ ಮಣಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಇಳಿಸಲು ಚಿಂತನೆ ನಡೆಸಿದೆ. ಇಂದು ಸಂಜೆ ಅಥವ ಗುರುವಾರ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಪ್ರಯಾಣ ದರ ಎಷ್ಟು ಕಡಿಮೆಯಾಗಲಿದೆ? ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕಳೆದ ಮೂರು-ನಾಲ್ಕು ತಿಂಗಳಲ್ಲಿ ಡೀಸೆಲ್ ದರ ಒಟ್ಟಾರೆ 8 ರೂ. ಇಳಿಕೆಯಾಗಿದ್ದರೂ ಸರ್ಕಾರ ಬಸ್ ಪ್ರಯಾಣ ದರ ಕಡಿಮೆ ಮಾಡಿರಲಿಲ್ಲ. ಚಾಲಕರ ವೇತನ ಹೆಚ್ಚಳ, ಭತ್ಯೆ ಹೆಸರಿನಲ್ಲಿ ನಷ್ಟ ಎಂದು ಹೇಳಿದ್ದ ಇಲಾಖೆ ದರ ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ಹೇಳಿ ಜನರ ಆಕ್ರೋಶಕ್ಕೆ ತುತ್ತಾಗಿತ್ತು. [ಬಸ್ ದರ ಇಳಿಕೆ ಅಸಾಧ್ಯ, ಸಚಿವರು ನೀಡಿದ ಕಾರಣಗಳು]

ಸದ್ಯ, ಜನರ ಮತ್ತು ಪ್ರತಿಪಕ್ಷಗಳ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಸ್ ಪ್ರಯಾಣ ದರ ಎಷ್ಟು ಇಳಿಕೆ ಮಾಡಬಹುದು? ಎನ್ನುವುದರ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. [ಮತ್ತೆ ಇಳಿಯಿತು ಡೀಸೆಲ್, ಪೆಟ್ರೋಲ್ ಬೆಲೆ]
ಒಂದೆರಡು ದಿನಗಳಲ್ಲಿ ಪ್ರಸ್ತಾವನೆ ಸಚಿವರಿಗೆ ಸಲ್ಲಿಕೆಯಾಗಲಿದ್ದು, ನಂತರ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಪ್ರಯಾಣ ದರ ಇಳಿಸುವ ಬೇಡಿಕೆಯನ್ನು ಸೋಮವಾರ ವಿಧಾನ ಪರಿಷತ್ನಲ್ಲಿ ಸಿ.ಎಂ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ತಳ್ಳಿ ಹಾಕಿದ್ದರು. ಆದರೆ, ಮಂಗಳವಾರ ಸರ್ಕಾರ ಈ ವಿಚಾರದಲ್ಲಿ ಚಿಂತನೆ ಆರಂಭಿಸಿದೆ.
ಬಿಜೆಪಿಗೆ ಟಾಂಗ್ : ಪ್ರಯಾಣ ದರವನ್ನು ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದ ಪ್ರತಿಪಕ್ಷ ಬಿಜೆಪಿಗೆ ಟಾಂಗ್ ನೀಡಿದ್ದ ಸಚಿವರು, ಪ್ರಧಾನಿ ಮೋದಿ ರಾಜ್ಯದಲ್ಲಿ ಬಸ್ ಪ್ರಯಾಣ ದರ ಕಡಿಮೆ ಮಾಡಲಿ. ನಂತರ ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನ ಕಡಿಮೆ ಮಾಡೋಣ ಹೇಳಿದ್ದರು.
ರಾಮಲಿಂಗಾ ರೆಡ್ಡಿ ಅವರ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದರು, ದೇಶದಲ್ಲಿ ಎಲ್ಲಿಯೂ ಬಸ್ ಪ್ರಯಾಣ ದರ ಇಳಿಕೆಯಾಗಿಲ್ಲ. ರಾಜ್ಯದಲ್ಲೂ ಬಸ್ ಪ್ರಯಾಣ ದರ ಇಳಿಕೆ ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಈಗ ಸರ್ಕಾರ ಯೂ-ಟರ್ನ್ ತೆಗೆದುಕೊಂಡಿದೆ.












Click it and Unblock the Notifications