Gas: 5 ವರ್ಷಗಳಲ್ಲಿ 60 ಲಕ್ಷ ಮನೆಗಳಿಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ
ಬೆಂಗಳೂರು, ಮಾರ್ಚ್ 04: ಕೇಂದ್ರ ಸರ್ಕಾರವು ಮನೆ ಮನೆ ನಲ್ಲಿಯಲ್ಲಿ ನೀರು ಬಂದಂತೆ, ಮನೆ ಮನೆ ಪೈಪ್ ಮೂಲಕ ಗ್ಯಾಸ್ ಒದಗಿಸುವ ಯೋಜನೆಗೆ ಚಾಲನೆ ನೀಡಿದೆ. ರಾಜ್ಯಗಳಿಗೆ ಈ ನಿಟ್ಟಿನಲ್ಲಿ ಕ್ರಮಕ್ಕೆ ಸೂಚಿಸಿದೆ. ಅದರಂತೆ ಕರ್ನಾಟಕ ಸರ್ಕಾರ ಕಾರ್ಯೋನ್ಮುಖವಾಗಿದೆ. ರಾಜ್ಯದಲ್ಲಿ ಬೇರೆ ಬೇರೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಒಂದೊಂದು ದರ ನಿಗದಿ ಆಗಿದೆ. ಹೀಗಾಗಿ ಮನೆಮನೆಗೆ ಗ್ಯಾಸ್ ಸಂಪರ್ಕ ಒದಗಿಸಲು ವಿಳಂಬವಾಗಿತ್ತು. ಸದ್ಯ ಸಮಸ್ಯೆ ಬಗೆಹರಿದಿದೆ.
ರಾಜ್ಯದಲ್ಲಿ 2030ರೊಳಗೆ ಬಾಕಿ ಉಳಿದಿರುವ 60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್-ಲೈನ್ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದು ವಿಧಾನ ಪರಿಷತ್ತಿನಲ್ಲಿ ಮಂಗಳವಾರ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಮಾಹಿತಿ ನೀಡಿದರು. ಬಿಜೆಪಿ ಸದಸ್ಯ ಡಿ ಎಸ್ ಅರುಣ್ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಗ್ಯಾಸ್ ಪೂರೈಕೆ ಕೊಳವೆ ಅಳವಡಿಸಲು ದೇಶದ ವಿವಿಧ ರಾಜ್ಯಗಳಲ್ಲಿ ಇರುವ ನಗರ ಅನಿಲ ಸರಬರಾಜು ನೀತಿಯ ಪ್ರಕಾರ ಮೀಟರ್ ಗೆ 01 ರೂಪಾಯಿ ನಿಗದಿಪಡಿಸಲಾಗಿದೆ. ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿನ ಉತ್ತಮ ಉಪಕ್ರಮಗಳ ಬಗ್ಗೆಯೂ ಕೇಂದ್ರ ಸರ್ಕಾರವೇ ರಾಜ್ಯಕ್ಕೆ ಪತ್ರ ಬರೆದು ತಿಳಿಸಿದೆ. ಆಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು.
1,022 ಸಿಎನ್ ಜಿ ಮರುಪೂರಣ ಕೇಂದ್ರ
ನಾಡಿನ ಸಾರ್ವಜನಿಕ ಹಿತ ಮತ್ತು ಪರಿಸರ ಸ್ನೇಹಿ ಕ್ರಮ ಎಂದು ನಾವೂ ಇದನ್ನು ಒಪ್ಪಿಕೊಂಡಿದ್ದೇವೆ. ಇದರಂತೆ ರಾಜ್ಯದಲ್ಲಿ ಒಟ್ಟು 66.25 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಮತ್ತು 1,022 ಸಿಎನ್ ಜಿ ಮರುಪೂರಣ ಕೇಂದ್ರಗಳನ್ನು ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
2015ರಲ್ಲಿ ಈ ಯೋಜನೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಭಾರತೀಯ ಅನಿಲ ಪ್ರಾಧಿಕಾರ (ಗೈಲ್) ಇದರ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. 2023ರವರೆಗೆ 4.07 ಲಕ್ಷ ಮನೆಗಳಿಗೆ ಗ್ಯಾಸ್ ಪೂರೈಕೆ ಸಂಪರ್ಕ ಕೊಟ್ಟಿದೆ. 320 ಸಿಎನ್ ಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಆಮೆಗತಿಯ ಪ್ರಗತಿ ನೋಡಿ ಹೊಸ ನೀತಿ ರೂಪಿಸಲಾಗಿದೆ.
ಇದರ ನಂತರ ಇನ್ನೂ 1.01 ಲಕ್ಷ ಮನೆಗಳಿಗೆ ಈ ಅನುಕೂಲ ಒದಗಿಸಿಲಾಗಿದೆ. 154 ಸಿಎನ್ ಜಿ.ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗ ಮತ್ತಷ್ಟು ವೇಗ ನೀಡಲು ಸ್ಥಳೀಯ ನಗರ ಸಂಸ್ಥೆಗಳ ಜತೆಗೂ ಸಮನ್ವಯದ ಸಭೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈವರೆಗೆ 5.10 ಲಕ್ಷ ಮನೆಗಳಿಗೆ ಸೌಲಭ್ಯ
ಈ ಯೋಜನೆಯಲ್ಲಿ ಇದುವರೆಗೂ ಒಟ್ಟು 5.10 ಲಕ್ಷ ಮನೆಗಳಿಗೆ ಸೌಲಭ್ಯ ಸಿಕ್ಕಿದ್ದು, 474 ಸಿಎನ್‌ಜಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಮುಂದಿನ ಐದು ವರ್ಷಗಳಲ್ಲಿ ಬಾಕಿ ಇರುವ ಗುರಿಯನ್ನು ತಲುಪಲಾಗುವುದು. ಇದಕ್ಕೆ ಸಂಬಂಧಿಸಿದಂತೆ 2024ರ ಜುಲೈನಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಲೋಕೋಪಯೋಗಿ ಇಲಾಖೆಗಳ ಅನುಮತಿ ಕೊಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಸೂಚನೆ ಪ್ರಕಾರ ಮೀಟರ್ ಗೆ 01 ರೂಪಾಯಿ ನಿಗದಿಪಡಿಸಿದ್ದೇವೆ. ಇದರಿಂದ ಆಗುವ ಲಾಭವನ್ನು ಅನಿಲ ಸರಬರಾಜು ಕಂಪನಿಗಳು ನಂತರದ ದಿನಗಳಲ್ಲಿ ಗ್ರಾಹಕರಿಗೆ ವರ್ಗಾಯಿಸಬೇಕು. ಇದಕ್ಕಾಗಿ ಸಂಬಂಧಪಟ್ಟವರಿಂದ ಮುಚ್ಚಳಿಕೆ ಬರೆಸಿಕೊಳ್ಳಾಗಿದೆ. ಈ ಅಂಶವನ್ನು ಹೊಸ ನೀತಿಯಲ್ಲೂ ಅಳವಡಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications