'ನಾನು ಮುಖ್ಯಮಂತ್ರಿಯಾಗಲು ಶಿಕ್ಷಕರೇ ಕಾರಣ'

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್, 05: ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಲು ಓರ್ವ ಶಿಕ್ಷಕ ಕಾರಣ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಮರಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2016ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.[ಮೋದಿ ಪಾಠಶಾಲೆ: ತಾಯಿ ಜನ್ಮ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ]

karnataka

ಪ್ರಾಥಮಿಕ ಶಿಕ್ಷಣವನ್ನು ಕಲಿಯದೇ ಇದ್ದ ತಮಗೆ ನಂಜೇಗೌಡ ಎಂಬ ಜಾನಪದ ನೃತ್ಯ ಶಿಕ್ಷಕರು ಮರಳಿನ ಮೇಲೆಯೇ ಅಕ್ಷರಾಭ್ಯಾಸವನ್ನು ಕಲಿಸಿಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಎಸ್.ಎಂ.ರಾಜಪ್ಪ ಎಂಬ ಮುಖ್ಯೋಪಾಧ್ಯಾಯರು ಮನೆ-ಮನೆಗೂ ಭೇಟಿ ನೀಡಿ ತಮ್ಮನ್ನೂ ಒಳಗೊಂಡಂತೆ ತಮ್ಮ ಗ್ರಾಮದ ಸಾಕಷ್ಟು ಮಕ್ಕಳನ್ನು ಐದನೇ ತರಗತಿಗೆ ನೇರವಾಗಿ ಪ್ರವೇಶ ದೊರಕಿಸಿಕೊಟ್ಟದ್ದನ್ನು ಮುಖ್ಯಮಂತ್ರಿಗಳು ನೆನಪಿಸಿಕೊಂಡರು. ಒಂದು ವೇಳೆ ಅವರು ಆ ಕೆಲಸ ಮಾಡದೇ ಇದ್ದಿದ್ದರೆ ತಾವು ಇಂದು ಈ ಮಟ್ಟಕ್ಕೆ ಏರುತ್ತಿರಲಿಲ್ಲ ಎಂದರು.[ಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರು]

ಸಾಮಾನ್ಯವಾಗಿ ತಮ್ಮ ಜೊತೆಯಲ್ಲಿದ್ದವರು ಮೇಲ್ಮಟ್ಟಕ್ಕೇರಿದರೆ ಅಸೂಯೆ ಪಡುವುದು ಮನುಷ್ಯ ಸಹಜ ಗುಣ, ಆದರೆ ಗುರುವಿಗೆ ತನ್ನ ಶಿಷ್ಯ ತನ್ನನ್ನು ಮೀರಿಸಿ ಉನ್ನತ ಮಟ್ಟಕ್ಕೇರುವುದು ಹೆಮ್ಮೆ ತರುವ ಸಂಗತಿ. ಅಂತಹ ಪವಿತ್ರ ವೃತ್ತಿ ಶಿಕ್ಷಕರದ್ದು ಎಂದು ಸಿದ್ಧರಾಮಯ್ಯ ಬಣ್ಣಿಸಿದರು.

ಶಿಕ್ಷಕರ ದಿನಾಚರಣೆಯ ದಿನದಂದು ಶಿಕ್ಷಕರು ಆತ್ಮವಲೋಕನ ಮಾಡಿಕೊಳ್ಳಬೇಕು, ಗುಣಮಟ್ಟದ, ಮೌಲ್ಯಯುತ ಶಿಕ್ಷಣವನ್ನು ದೊರಕಿಸಿಕೊಟ್ಟು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ಅವರ ಮೇಲಿದ್ದು, ವಿದ್ಯಾರ್ಥಿಗಳು ಸದಾ ನೆನಪು ಉಳಿಯುವಂತಹ ಶಿಕ್ಷಕರಾಗಬೇಕಿದೆ ಎಂದರು.

ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಎಲ್ಲರಿಗೂ ಸಮಾನವಾದ, ಗುಣಮಟ್ಟದ ಶಿಕ್ಷಣ ದೊರಕಿಸಿ ಕೊಡುವುದು ಸರ್ಕಾರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಸರ್ಕಾರ ಬದ್ದವಾಗಿದೆ ಎಂಬ ಭರವಸೆ ನೀಡಿದರು.

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವುದು ನಿಜವಾದ ಶಿಕ್ಷಕನ ಕೆಲಸ, ಇದನ್ನು ಪ್ರಾಮಾಣಿಕವಾಗಿ ಎಲ್ಲಾ ಶಿಕ್ಷಕರೂ ಮಾಡಿದಾಗ ಸದೃಢ ಸಮಾಜ ನಿರ್ಮಾಣ ಸಾದ್ಯವಾಗಲಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಯನ್ನು ಆದ್ಯತಾ ವಲಯ ಎಂದು ಗುರುತಿಸಿದೆ, ಪ್ರಸಕ್ತ ಸಾಲಿನಲ್ಲಿ 728 ಶಾಲೆಗಳನ್ನು ಪುನರಾರಂಭ ಮಾಡಲಾಗಿದೆ. ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಿದೆ, ಅಲ್ಲದೆ, 2007 ರ ವರ್ಗಾವಣಾ ನೀತಿಯಲ್ಲಿ ಸಮಗ್ರ ಬದಲಾವಣೆ ತಂದು ಪ್ರಸಕ್ತ ಸಾಲಿನಿಂದ ಹೊಸ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
.
ಶಿಕ್ಷಣದಲ್ಲಿ ಸಮಾನತೆ ಕಾಯ್ದುಕೊಳ್ಳಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರಿಗೆ ತರಬೇತಿ, ಮಕ್ಕಳಿಗೆ ಪ್ರೋತ್ಸಾಹ, ಪೋಷಕರ ಪಾಲ್ಗೊಳ್ಳುವಿಕೆ, ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ಖ್ಯಾತ ಸಾಹಿತಿ, ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಪಠ್ಯಕ್ರಮ ಪರಿಷ್ಕರಣೆಗೆ ಸಮಿತಿ ರಚಿಸಲಾಗಿದೆ. ಅಂತೆಯೇ 27 ವಿಷಯವಾರು ಸಮಿತಿಯು ಇದೀಗ ತನ್ನ ವರದಿಯನ್ನು ಮಂಡಿಸಿದೆ. ಐ.ಸಿ.ಎಸ್.ಇ ಹಾಗೂ ಸಿ.ಬಿ.ಎಸ್.ಇ. ಪಠ್ಯಕ್ರಮಕ್ಕೆ ರಾಜ್ಯದ ಪಠ್ಯಕ್ರಮವು ಸರಿಸಮಾನವಾಗಿರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ದಾಖಲಾತಿ ಹಾಗೂ ಮಕ್ಕಳ ಹಾಜರಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ 19500 ಮುಖ್ಯ ಶಿಕ್ಷಕರ ಹುದ್ದೆ ಸೃಷ್ಠಿಸಲಾಗಿದ್ದು, 7500 ಶಿಕ್ಷಕರಿಗೆ ಮುಂಬಡ್ತಿ ನೀಡಲಾಗಿದೆ. ಸಮಂಜಸ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆಯನ್ನು ಸಚಿವರು ನೀಡಿದರು. ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರು ಕಾರ್ಯನಿರ್ವಹಿಸುವ ಶಾಲೆಗಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದ ಸಚಿವರು, ಮಕ್ಕಳಲ್ಲಿ ಹೊಸ ಆಲೋಚನೆಗಳು ಮೂಡುವಂತಹ ಕಾರ್ಯಗಳನ್ನು ಶಿಕ್ಷಕರು ಮಾಡುವಂತಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ 60 ಶಿಕ್ಷಕರನ್ನು ಮುಖ್ಯಮಂತ್ರಿ ಸನ್ಮಾನಿಸಿದರು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಶಾಸಕರಾದ ರಾಮಚಂದ್ರೇಗೌಡ, ಎನ್.ಎ.ಹ್ಯಾರೀಸ್, ಬಿ.ಶಿವಣ್ಣ, ಪುಟ್ಟಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಸೌಜನ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ, ರಾಜ್ಯ ಯೋಜನಾ ನಿರ್ದೇಶಕರಾದ ಡಾ: ಪಿ.ಸಿ.ಜಾಫರ್ ಅವರೂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: On the occasion of Teachers Day celebration Karnataka Government honored Number of teachers who are achieved is the best in their field. Chief Minister Siddaramaiah, Minister for Primary and Secondary Education Tanveer Sait participated.
Please Wait while comments are loading...