SSLC Exam: ರಾಜ್ಯದಲ್ಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಗಮನಿಸಲೇಬೇಕಾದ ಮಹತ್ವದ ಮಾಹಿತಿ
SSLC Exam: ರಾಜ್ಯದಲ್ಲಿ ಶಿಕ್ಷಣ ಇಲಾಖೆಯು 2026ರ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ನೋಂದಣಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ, ಅದರಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮುಂಬರಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವಿದ್ಯಾರ್ಥಿಗಳ ನೋಂದಣಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಏನೆಲ್ಲಾ ಇದೆ ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿರುತ್ತದೆ. ಅದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ವಿದ್ಯಾರ್ಥಿಗಳಿಗೆ ನೋಂದಣಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಾಲೆಗಳ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ನೋಂದಣಿ ಮಾಡುವಂತೆ ತಿಳಿಸಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 710 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಬಾಲಕಿಯರು, ಪರಿಶಿಷ್ಟರು, ಆದಾಯ ಮಿತಿಗೆ ಒಳಪಟ್ಟು ವಿವಿಧ ಪ್ರವರ್ಗಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗಲು ಶೇಕಡ 75ರಷ್ಟು ಹಾಜರಾತಿ ಹೊಂದಿರುವುದು ಕಡ್ಡಾಯ ಆಗಿದೆ.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಣಿ ಮಾಡಿಕೊಳ್ಳುವ ಖಾಸಗಿ, ಪುನರಾವರ್ತಿತ ಅಭ್ಯರ್ಥಿಗಳಿಗೆ ಇಲಾಖೆ ನಿಯಮ ಸರಳೀಕರಣ ಮಾಡಿದೆ. ಈ ಮೊದಲು ವಯೋಮಿತಿ ಆಧಾರದಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕೆಂದರೆ ಅಭ್ಯರ್ಥಿಗಳು ಸಮೀಪದ ಸರ್ಕಾರಿ ಪ್ರೌಢಶಾಲೆ ಅಥವಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಈ ಬಾರಿ ಮೊಬೈಲ್‌ನ ಮೂಲಕ ಆನ್‌ಲೈನಲ್ಲಿಯೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಸದರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಿಂದ 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1ಕ್ಕೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ ವಿವರಗಳನ್ನು ಮಂಡಳಿಯ https://kseab.karnataka.gov.inಗೆ ಭೇಟಿ ನೀಡಿ ಶಾಲಾ ಲಾಗಿನ್ ಮೂಲಕ ಅಪ್ಲೋಡ್ ಮಾಡಬಹುದು. ವಿದ್ಯಾರ್ಥಿಗಳ ನೋಂದಣಿಗೆ ಅಗತ್ಯ ಇರುವ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ನಿಗಧಿಪಡಿಸಿದ ದಿನಾಂಕದ ಒಳಗೆ ಶಾಲಾ ಲಾಗ್ ಇನ್‌ನಲ್ಲಿ ವಿದ್ಯಾರ್ಥಿಗಳ ನೋಂದಣಿಯನ್ನು ಮಾಡಬೇಕು.
ಈ ಸಾಲಿನಿಂದ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಯನ್ನು ನೇರವಾಗಿ ಅಭ್ಯರ್ಥಿಗಳೇ ಮಂಡಲಿ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಕುರಿತ ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ- 1966 Chapter VI - ನಿಯಮ 36 ಮತ್ತು 37ರ ಅನ್ವಯ ಮಾನ್ಯತೆ ಪಡೆದ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಮಾತ್ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಲು ಅವಕಾಶ ಇರುತ್ತದೆ.
ಕರ್ನಾಟಕ ಶಿಕ್ಷಣ ಕಾಯ್ದೆ1983ರ ನಿಯಮ 30, 31, 33, 36 ಹಾಗೂ 38ರ ಅನ್ವಯ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪ್ರೌಢ ಶಾಲೆಗಳು ನೋಂದಣಿ ಮತ್ತು ಮಾನ್ಯತೆಯನ್ನು ಕಡ್ಡಾಯವಾಗಿ ಪಡೆದಿರಬೇಕು ಹಾಗೂ ಪ್ರೌಢ ಶಾಲೆಯಲ್ಲಿ ಬೋಧನೆ ಮಾಡುವ ಮಾಧ್ಯಮಗಳಿಗೆ ಅನುಗುಣವಾಗಿ ಸಕ್ಷಮ ಪ್ರಾಧಿಕಾರದಿಂದ ಮಾನ್ಯತೆಯು ಅಪ್ಡೇಟ್ ಆಗಿರಬೇಕು. 2025-26ನೇ ಸಾಲಿನ ಮಾನ್ಯತೆ ನವೀಕರಣವನ್ನು ಸಕ್ಷಮ ಪ್ರಾಧಿಕಾರದಿಂದ ಸಕಾಲದಲ್ಲಿ ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಹೀಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ 1ರ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ.











Click it and Unblock the Notifications