ಕರ್ನಾಟಕದಲ್ಲಿ ದೊಡ್ಡ ಜಿಲ್ಲೆ ಮತ್ತು ತಾಲೂಕುಗಳನ್ನು ವಿಭಜಿಸಬೇಕು: ಜಗದೀಶ್ ಶೆಟ್ಟರ್
ಬೆಳಗಾವಿ, ಅಕ್ಟೋಬರ್ 04: ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯು ವಿಭಜನೆಗೊಂಡು ಹೊಸ ಜಿಲ್ಲೆಯಾದ ವಿಜಯನಗರ ಮೂರು ವರ್ಷಗಳ (2021) ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದೆ. ಇದರ ಬೆನ್ನಲ್ಲೆ ಮೊನ್ನೆಯಷ್ಟೇ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಬೇಕು ಎಂಬ ಮಾತು ಕೇಳಿ ಬಂದಿತ್ತು. ಇದೀಗ ರಾಜ್ಯದ ದೊಡ್ಡ ದೊಡ್ಡ ಜಿಲ್ಲೆಗಳು, ತಾಲೂಕುಗಳನ್ನು ವಿಂಗಡಣೆ ಮಾಡಬೇಕು ಎಂಬ ಮಾತು ಬಿಜೆಪಿ ಸಂಸದರಿಂದಲೇ ಕೇಳಿ ಬಂದಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಬೆಳಗಾವಿ ಜಿಲ್ಲೆಯ ವಿಭಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿನ ದೊಡ್ಡ ದೊಡ್ಡ ಜಿಲ್ಲೆಗಳನ್ನು ಹಾಗೂ ತಾಲೂಕುಗಳನ್ನು ವಿಭಜನೆ ಮಾಡಬೇಕು ಎಂಬ ವೈಯಕ್ತಿಕ ವಿಚಾರ ಮೊದಲಿನಿಂದಲೂ ನನಗಿದೆ ಎಂದರು.

ಹೀಗೆ ಹೇಳುವ ಮೂಲಕ ಅಖಂಡ ಕರ್ನಾಟಕದ ಜಿಲ್ಲೆ, ತಾಲೂಕುಗಳ ಪ್ರತ್ಯೇಕತೆ ಬಗ್ಗೆ ಬಾಂಬ್ ಸಿಡಿಸಿದರಾ ಎಂದು ಯೋಚಿಸಬೇಡಿ. ಏಕೆಂದರೆ ಸುಗಮ ಆಡಳಿತ ಯಂತ್ರಕ್ಕಾಗಿ, ಸರ್ಕಾರದ ಆಡಳಿತ ಜನರ ಮನೆ ಬಾಗಿಲಿಗೆ ಹೋಗಿ ತಲುಪಬೇಕೆಂದರೆ ಜಿಲ್ಲೆ ಹಾಗೂ ತಾಲೂಕುಗಳನ್ನು ವಿಂಗಡಣೆ ಮಾಡುವುದು ಬಹಳಷ್ಟು ಅವಶ್ಯಕತೆ ಇದೆ. ಇದರಿಂದ ಜನರಿಗೆ ಸುಲಭವಾಗಿ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಸದುದ್ದೇಶದಿಂದ ತಿಳಿಸಿದ್ದಾರೆ.
ರಾಜ್ಯದಲ್ಲಿ ವಿಭಜನೆಯಾದ ಜಿಲ್ಲೆಗಳು
ರಾಜ್ಯದಲ್ಲಿನ ಹಲವು ಜಿಲ್ಲೆಗಳನ್ನು ಒಡೆದು ಚಿಕ್ಕ ಜಿಲ್ಲೆಯನ್ನಾಗಿ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ.
ಈಗಾಗಲೇ ಚಾಮರಾಜನಗರ, ಮೈಸೂರು, ಚಿತ್ರದುರ್ಗ, ದಾವಣಗೆರೆ ವಿಭಜನೆ ಆಗಿದೆ. ಜೆಎಚ್ ಪಟೇಲ್ ಅವರು ಜಿಲ್ಲೆ ವಿಭಜನೆ ಮಾಡಿದಾಗ ನಾವು ಸ್ವಾಗತ ಮಾಡಿದ್ದೇವೆ.
ನಾನು ಮುಖ್ಯಮಂತ್ರಿ ಇದ್ದಾಗ 43 ತಾಲೂಕುಗಳನ್ನು ಮಾಡಿದ್ದೆ. ಜನರ ಅಭಿಪ್ರಾಯ, ವೈಜ್ಞಾನಿಕವಾಗಿ ಯಾವುದೇ ತೊಂದರೆ ಆಗದಂತೆ ವಿಭಜನೆ ಮಾಡಬಹುದು ಎಂದು ಬೆಳಗಾವಿ ವಿಭಜನೆ ಬಗ್ಗೆ ಅವರು ತಿಳಿಸಿದರು.
ಶಾಸಕರ ಹೇಳಿಕೆಯಿಂದ ಸಿದ್ದರಾಮಯ್ಯ ಸಾಚಾ ಆಗಲ್ಲ: ಶೆಟ್ಟರ್
ಮೈಸೂರು ದಸರಾ ಉದ್ಘಾಟನೆ ವೇಳೆ, ಜೆಡಿಎಸ್ ಶಾಸಕ ಜಿಟಿ ದೇವೆಗೌಡ ಅವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆಗ್ರಹಕ್ಕೆ ಸಂಬಂಧಿಸಿದಂತೆ ಮಾಡನಾಡಿದ ಜಿಟಿಡಿ ಅವರು, ಸಿಎಂ ಮಾತ್ರ ಏಕೆ ಎಚ್‌ಡಿ ಕುಮಾರಸ್ವಾಮಿ ಸಹ ಕೊಡಲಿ ಎಂದರು. ಇದು ಭಾರಿ ಚರ್ಚೆ ಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಜಗದೀಶ್ ಶೆಟ್ಟರ್, ಹಿತಾಶಕ್ತಿಗಳ ಹೇಳಿಕೆಗಳಿಂದ ಮುಡಾ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರು ಸಾಚಾ ಆಗುವುದಿಲ್ಲ. ರಾಜ್ಯಪಾಲರು ಮುಡಾ ಹಗರಣವನ್ನು ತನಿಖೆಗೆ ಕೊಟ್ಟಾಗ ರಾಜ್ಯಪಾಲರಿಗೆ ಸಿದ್ದರಾಮಯ್ಯ ಅವರು ಚಾಲೆಂಜ್ ಮಾಡಿದ್ದರು. ಆದರೆ ಹೈಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿಯುವ ಕೆಲಸ ಮಾಡಿತು.
ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟು ಸಹಕರಿಸಿ
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಹೋಗಬಹುದಿತ್ತು. ಎಲ್ಲಿ ಹೋದರೂ ಅಷ್ಟೇ ಎಂದು ಅವರ ವಕೀಲರೇ ಸಿಎಂಗೆ ಸಲಹೆ ನೀಡಿರಬಹುದು. ಅದಕ್ಕಾಗಿ ಅವರು ಸುಮ್ಮನಾಗಿರಬಹುದು. ಸದ್ಯ ಮುಡಾ ಪ್ರಕರಣದ ಎಫ್ಐಆರ್ ದಾಖಲಾಗಿದೆ ತನಿಖೆ ಶುರುವಾಗುತ್ತದೆ. ತನಿಖೆ ಮುಗಿಯುವವರೆಗೂ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದ ಅವರು, ಮೈಸೂರು ದಸರಾ ಕಾರ್ಯಕ್ರಮಕ್ಕೆ ಹೋಗಿ ಚಾಲನೆ ಕೊಟ್ಟಿದ್ದೀರಿ ಇದರಿಂದ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಕಡಿಮೆ ಆಗುತ್ತದೆ ಎಂದು ಹೇಳಿದರು.












Click it and Unblock the Notifications