ಕರ್ನಾಟಕ ಸಂಭ್ರಮ 50; ಲಾಂಛನ ವಿನ್ಯಾಸ ಮಾಡಿ, ಬಹುಮಾನ ಗೆಲ್ಲಿ
ಬೆಂಗಳೂರು, ಸೆಪ್ಟೆಂಬರ್ 18; ಕರ್ನಾಟಕ ಸರ್ಕಾರ ಈಗಾಗಲೇ 2023-24ನೇ ಸಾಲಿನ ಬಜೆಟ್‌ನಲ್ಲಿ 'ಕರ್ನಾಟಕ ಸಂಭ್ರಮ 50' 'ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸುವ ಘೋಷಣೆ ಮಾಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಈ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಈ ಕಾರ್ಯಕ್ರಮದ ಕುರಿತು ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಜನರಿಂದ ಲಾಂಛನಗಳನ್ನು ಆಹ್ವಾನಿಸಿದ್ದಾರೆ.
ಲಾಂಛನ ರಚಿಸಿ, ಬಹುಮಾನ ಗೆಲ್ಲಿ; ಪ್ರಕಟಣೆಯಲ್ಲಿ ನಿರ್ದೇಶಕರು 'ಕರ್ನಾಟಕ ಸಂಭ್ರಮ 50' 'ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉದ್ದೇಶಿಸಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಲು ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ (ಲೋಗೋ)ವನ್ನು ಬಳಸಲು ತೀರ್ಮಾನಿಸಲಾಗಿದೆ. ಆಸಕ್ತರಿಂದ ಸುಂದರವಾದ ಲಾಂಛನದ ಮಾದರಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಯ್ಕೆಯಾಗುವ ಮಾದರಿ ಲಾಂಛನಕ್ಕೆ 25,000 ರೂ.ಗಳ ಬಹುಮಾನವನ್ನು ನಿಗದಿಪಡಿಸಲಾಗಿದೆ. ಲಾಂಛನವನ್ನು ದಿನಾಂಕ 20/9/2023 ರಿಂದ 30/9/2023ರ ತನಕ ಕಳುಹಿಸಲು ಅವಕಾಶವಿದೆ. ಆಸಕ್ತರು https://www.kannadasiri.karnataka.gov.in ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಬಜೆಟ್‌ನಲ್ಲಿ ಘೋಷಣೆ; ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.
ಬಜೆಟ್‌ನಲ್ಲಿ ನಾಡಿನ ನೆಲ, ಜಲ, ಭಾಷೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದರು. ಬಜೆಟ್ ಭಾಷಣದಲ್ಲಿ 'ಒಂದೇ ಒಂದೇ ಒಂದೇ ಕರ್ನಾಟಕವೊಂದೇ, ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ, ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ' ಎಂಬ ಡಾ. ದ. ರಾ. ಬೇಂದ್ರೆ ಅವರ ಕವನ ವಾಚಿಸಿದರು.
ಬಜೆಟ್ ಭಾಷಣದಲ್ಲಿ ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವೆಂಬರ್, 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವಜನತೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಘೋಷಣೆ ಮಾಡಿದರು.
ಕರ್ನಾಟಕ ಸರ್ಕಾರ ಜುಲೈನಲ್ಲಿ 'ಕರ್ನಾಟಕ ಸಂಭ್ರಮ 50' 'ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ' ಎಂಬ ಶೀರ್ಷಿಕೆಯಡಿ ವರ್ಷಪೂರ್ತಿ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಈಗ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ.
ಮುಂಗಾರು ಮಳೆ ಕೈ ಕೊಟ್ಟು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ನಾಡಿನ ರೈತರು ಸಂಕಷ್ಟದಲ್ಲಿರುವಾಗ ಸಂಭ್ರಮಾಚರಣೆ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯವಿದೆ. ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಘೋಷಣೆ ಮಾಡಿದೆ.
ಆದ್ದರಿಂದ ಮಂಡ್ಯದಲ್ಲಿ ನಡೆಯಬೇಕಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಅಲ್ಲದೇ ಹಂಪಿಯಲ್ಲಿ ನಡೆಯಬೇಕಿದ್ದ ಹಂಪಿ ಉತ್ಸವ ಸಹ ಮುಂದೂಡಿಕೆ ಮಾಡಲಾಗಿದೆ.












Click it and Unblock the Notifications