APAAR ID: ಆಪಾರ್ ನೋಂದಣಿಯಲ್ಲಿ ಶೇ. 52 ಸಾಧನೆ: ಪ್ರಥಮ ಜಿಲ್ಲೆ ಯಾವುದು? ಜಿಲ್ಲಾವಾರು ಮಾಹಿತಿ
ಹುಬ್ಬಳ್ಳಿ ಫೆಬ್ರವರಿ 18: ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಒಂದೇ ವೆಬ್ ಸೈಟ್ ನಲ್ಲಿ ದೊರಕಿಸುವ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಜಾರಿಗೆ ತಂದಿರುವ ಏಕ ರೂಪದ ಗುರುತಿನ ಚೀಟಿ 'ಅಪಾರ್ ಐಡಿ' (APAAR ID-ಸ್ವಯಂ ಚಾಲಿತ ಶೈಕ್ಷಣಿಕ ಖಾತಾ ನೋಂದಣಿ) ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ. ಏಕೆಂದರೆ ರಾಜ್ಯದಲ್ಲಿ ಈವರೆಗೆ ಕೇವಲ ಶೇ. 52.19ರಷ್ಟು ಮಾತ್ರ ನೋಂದಣಿ ಆಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದಾದ್ಯಂತ ಒಟ್ಟು1,15,17,573 2 ವಿದ್ಯಾರ್ಥಿಗಳಿದ್ದು, ಅದರಲ್ಲಿ 60,11,496 ಮಕ್ಕಳು ಮಾತ್ರವೇ ಆಪಾರ್ ಐಡಿ ಕಾರ್ಡ್‌ಗಾಗಿ ನೋಂದಣಿ ಆಗಿದೆ. ಇನ್ನೂ 54,33,055 ಮಕ್ಕಳ ನೋಂದಣಿ ಬಾಕಿ ಇದೆ. ಈವರೆಗೆ ಶೇ. 52.19 ಮಕ್ಕಳ ಅಪಾರ್ ಐಡಿ ಜನರೇಟ್ ಆಗಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 76.98 ನೋಂದಣಿಯಾಗಿ ಪ್ರಥಮ ಸ್ಥಾನದಲ್ಲಿದ್ದರೆ, ಹಾವೇರಿ ಜಿಲ್ಲೆ ಶೇ. 33.97 ಮೂಲಕ ಕೊನೆಯ ಸ್ಥಾನದಲ್ಲಿದೆ.

ಆಪಾರ ಐಡಿ ಮಾಡಿಸಲು ಪಾಲಕರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ. ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆ ಕಾಲೇಜು ಆಡಳಿತ ಮಂಡಳಿ ಪಾಲಕರ ಒಪ್ಪಿಗೆಯ ಮೇರೆಗೆ ಕಾರ್ಡ್ ನೋಂದಣಿ ಮಾಡುತ್ತಿವೆ. ಆದರೆ, ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿನ ವ್ಯತ್ಯಾಸ ಹಾಗೂ ಪಾಲಕರಲ್ಲಿ ತಿಳಿವಳಿಕೆ ಕೊರತೆಯಿಂದಾಗಿ ನೋಂದಣಿ ಕಾರ್ಯ ಚುರುಕು ಪಡೆಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ಆಪಾರ್ ಐಡಿ ನೋಂದಣಿ ಕಾರ್ಯ ನಡೆಯುತ್ತಿದೆ. ಆದರೆ, ವಿದ್ಯಾರ್ಥಿಗಳ ಗುರುತಿನ ಚೀಟಿಯಲ್ಲಿನ ವ್ಯತ್ಯಾಸದಿಂದಾಗಿ ಕೊಂಚ ಕುಂಠಿತಗೊಂಡಿದೆ. ಆಧಾರ್ ತಿದ್ದುಪಡಿ ಕೇಂದ್ರ ಹೆಚ್ಚಿಸುವಂತೆ ಈಗಾಗಲೇ ಕೇಳಿಕೊಳ್ಳಲಾಗಿದ್ದು, ಪಾಲಕರಲ್ಲಿಯೂ ತಿಳಿವಳಿಕೆ ಮೂಡಿಸಲಾಗಿದೆ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಹೇಳಿದರು.
ಕಡಿಮೆ ನೋಂದಣಿ, ವಿಳಂಬಕ್ಕೆ ಕಾರಣವೇನು?
ಅಪಾರ್ ಐಡಿ ಮಾಡಿಸಲು ಮಕ್ಕಳ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಿದೆ. ಆದರೆ, ಆಧಾರ್ ಕಾರ್ಡ್ ಹಾಗೂ ಶಾಲೆ ದಾಖಲಾತಿಯಲ್ಲಿನ ಹೆಸರು, ಹುಟ್ಟಿದ ದಿನಾಂಕ, ಸರ್ ನೇಮ್ ಬದಲಾವಣೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಕಾರ್ಡ್ ನೋಂದಣಿಯಾಗುತ್ತಿಲ್ಲ.
ಇದೀಗ ವಿದ್ಯಾರ್ಥಿ ಪಾಲಕರು ಆಧಾರ್ ನೋಂದಣಿ ಕೇಂದ್ರದತ್ತ ಮುಗಿಬಿದ್ದಿದ್ದಾರೆ. ತಾಲೂಕಿಗೊಂದು ಆಧಾರ್ ತಿದ್ದುಪಡಿ ಕೇಂದ್ರ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸರ್ಕಾರ ಸ್ಪಂದಿಸಬೇಕಿದೆ. ತಾಲೂಕಿನ ಶಿಕ್ಷಣ ಕೇಂದ್ರದಲ್ಲಿಯೇ ಅಧಾರ್ ತಿದ್ದುಪಡಿ ಮಾಡಿದರೆ ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ಇದರಿಂದ ಅಪಾರ್ ಐಡಿ ನೋಂದಣಿ ಕಾರ್ಯವೂ ಸಾಕಷ್ಟು ವೇಗ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಪಾರ್ ಕಾರ್ಡ್ ಜಿಲ್ಲಾವಾರು ಸಾಧನೆ
ರಾಜ್ಯದ ಬಳ್ಳಾರಿಯಲ್ಲಿ ಅಪಾರ್ ನೋಂದಣಿ 52.68%, ಚಿಕ್ಕೋಡಿ ಶೇ. 50.38, ಬೆಂಗಳೂರು ಗ್ರಾಮೀಣ ಶೇ. 60.22, ಬೆಂಗಳೂರು ಉತ್ತರ ಶೇ. 44.26, ಬೆಂಗಳೂರು ದಕ್ಷಿಣ ಶೇ. 36.96, ಬೀದರ್ ಶೇ.40.22, ಚಾಮರಾಜನಗರ ಶೇ.76.04, ಚಿಕ್ಕಬಳ್ಳಾಪುರ ಶೇ.53.16, ಚಿಕ್ಕಮಂಗಳೂರು ಶೇ.68.45, ಚಿತ್ರದುರ್ಗ ಶೇ.52.74.
ದಕ್ಷಿಣ ಕನ್ನಡ ಶೇ.76.98, ಮೈಸೂರು ಶೇ. 69.32, ರಾಯಚೂರು ಶೇ.44.34, ರಾಮದುರ್ಗ ಶೇ.67.84, ಶಿವಮೊಗ್ಗ ಶೇ.75.79, ವಿಜಯಪುರ ಶೇ.51.17 ಹಾಗೂ ಯಾದಗಿರಿ ಶೇ. 55.59 ರಷ್ಟು ಮಕ್ಕಳ ನೋಂದಣಿ ಮಾಡಿಸಲಾಗಿದೆ.
ಈ ಐಡಿಯಿಂದ ಏನು ಪ್ರಯೋಜನ?
ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ 2023ರಂದು ವಿದ್ಯಾರ್ಥಿ ಕಾರ್ಡ್ ರಚಿಸಲು ಸೂಚಿಸಿದೆ. ಇದು ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಸಂಪೂರ್ಣ ಶೈಕ್ಷಣಿಕ ಮಾಹಿತಿ ಒಳಗೊಂಡಿರುತ್ತದೆ. ವರ್ಗವಾರು ಸರ್ಟಿಫಿಕೇಟ್‌ಗಳು, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧನೆ, ಕ್ರೀಡಾ ಸಾಧನೆ, ಶೈಕ್ಷಣಿಕ ಸಾಲ, ಶಾಲಾ ದಾಖಲಾತಿ ಸೇರಿದಂತೆ ಸಂಪೂರ್ಣ ದಾಖಲೆಗಳು ಆಪಾರ್ ಐಡಿಯಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಗೊಳ್ಳಲಿವೆ.
ವಿದ್ಯಾರ್ಥಿ ಪಡೆದ ಅಂಕ, ಪತ್ಯೇತರ ಚಟುವಟಿಕೆ, ಪ್ರಸ್ತುತ ಶಾಲೆಯಲ್ಲಿ ಕಲಿಯುತ್ತಿರುವ ಶೈಕ್ಷಣಿಕ ಮಾಹಿತಿ ಆಪಾರ್ ಐಡಿಯಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹಗೊಳ್ಳುತ್ತವೆ. ಇದು ವಿದ್ಯಾರ್ಥಿಗಳು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಳ್ಳಲು ಸಹಕಾರಿಯಾಗುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಆಪಾರ್ ಐಡಿ ಬಳಸಿ ಇದನ್ನು ತಕ್ಷಣ ಪರಿಶೀಲಿಸಬಹುದು.












Click it and Unblock the Notifications