Kannada Rajyotsava 2026 Offer: ಸಾಹಿತ್ಯಾಸಕ್ತರಿಗೆ ಗುಡ್‌ನ್ಯೂಸ್, ಪುಸ್ತಕಗಳಿಗೆ 50% ಡಿಸ್ಕೌಂಟ್
ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡಾ 50ರಷ್ಟು ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಸಾಹಿತ್ಯಾಕ್ತರು, ಓದುಗ ಪ್ರೇಮಿಗಳಿಗೆ, ಪುಸ್ತಕ ಪ್ರಿಯರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುಡ್‌ನ್ಯೂಸ್ ನೀಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಅವರು ಈ ಬಗ್ಗೆ ತಿಳಿಸಿದ್ದು, ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದ್ದಾರೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ (ಸಂಪರ್ಕ ಸಂಖ್ಯೆ:080-22107705) ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ.

ಆನ್‌ಲೈನ್‌ನಲ್ಲೂ ಸಿಗುತ್ತೆ ಡಿಸ್ಕೌಂಟ್
ಇನ್ನೂ ಕನ್ನಡ ಪುಸ್ತಕ ಪ್ರಾಧಿಕಾರದ ಆನ್ ಲೈನ್ https://kpp.karnataka.gov.in (ಆನ್ಲೈನ್ ಪುಸ್ತಕ ಖರೀದಿಗೆ ವಿಭಾಗ ಇಲ್ಲಿ ವೀಕ್ಷಿಸಿ) ನಲ್ಲಿ ಕೂಡ ಈ ಶೇಕಡಾ 50ರಷ್ಟು ರಿಯಾಯಿತಿ ಲಭ್ಯವಿದೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಕನ್ನಡ ಪುಸ್ತಕ ಪ್ರಾಧಿಕಾರದ್ದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
71 ಸಾಧಕರಿಗೆ ರಾಜ್ಯೋತ್ಸವ ಸನ್ಮಾನ
ಪ್ರಸ್ತುತದಲ್ಲಿ ರಾಜ್ಯದಲ್ಲಿ 71ನೇ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಕಲೆ, ಚಿತ್ರಕಲಾ, ಚಿತ್ರರಂಗ, ಸಮಾಜಸೇವೆ, ಸಂಗೀತ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಹ ಬಿಡುಗಡೆ ಮಾಡಿದೆ. ಇಂದಿನ ಸರ್ಕಾರಿ ಕಾರ್ಯಕ್ರಮದಲ್ಲಿ ಆ ಎಲ್ಲ ಗಣ್ಯಮಾನ್ಯರಿಗೆ ಗೌರವಿಸಲಾಗುತ್ತದೆ.
ಇಂದು ಭಾನುವಾರ ಆಗಿದ್ದರಿಂದ ರಾಜ್ಯ ಶಾಲೆಗಳಲ್ಲಿ ರಾಜ್ಯೋತ್ಸವ ಆಚರಿಸಬೇಕು ಎಂದಿರುವ ರಾಜ್ಯ ಸರ್ಕಾರ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು ನಿರ್ದೇಶಿಸಿತ್ತು. ಅದರಂತೆ ರಾಜ್ಯಾದ್ಯಂತ ಕನ್ನಡದ ಕಂಪು ಬೀರಲಿದೆ. ಕನ್ನಡಿಗರು ಸಂಭ್ರಮದಿಂದ ಆಚರಣೆಯಲ್ಲಿ ತೊಡಗಿದ್ದಾರೆ.


Click it and Unblock the Notifications
