Rain Alert | ಕರಾವಳಿಯಲ್ಲಿ ವ್ಯಾಪಕ ಮಳೆ: ಗುರುವಾರ, ಶುಕ್ರವಾರ ಯೆಲ್ಲೋ ಅಲರ್ಟ್- ಬೆಂಗಳೂರಿನ ಸ್ಥಿತಿಗತಿ ಏನು?
ಬೆಂಗಳೂರು, ಜುಲೈ 12: ಕರಾವಳಿ ಕರ್ನಾಟಕದಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಮುನ್ಸೂಚನೆ ನೀಡಿದೆ. ಗುರುವಾರ ಮತ್ತು ಶುಕ್ರವಾರದಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ (64.5 ಮಿಮೀ ನಿಂದ 115.5 ಮಿಮೀ) ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಈ ಮೂಲಕ ಯೆಲ್ಲೋ ಅಲರ್ಟ್ ಅನ್ನು ಘೋಷಿಸಿದೆ.
ಕರಾವಳಿ ಕರ್ನಾಟಕದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಐಎಂಡಿ ಸೂಚಿಸಿದೆ.
'ಜುಲೈ 12ರಿಂದ 15 ರ ವರೆಗೆ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರದಿಂದ ದೂರವಿರುವುದು ಒಳಿತು ಎಂದು ಹೇಳಲಾಗಿದೆ.

ಗುರುವಾರ ಮತ್ತು ಶುಕ್ರವಾರ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಾವಣಗೆರೆ ಮತ್ತು ಕೋಲಾರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿ ಹವಾಮಾನ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲ.
ಬುಧವಾರ ಮತ್ತು ಭಾನುವಾರದ ನಡುವೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹಗುರವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಒಂದು ಅಥವಾ ಎರಡು ಬಾರಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಐಎಂಡಿ ಹೇಳಿದೆ.
ವಾರಾಂತ್ಯದವರೆಗೂ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಸಂಭವ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್
ಉತ್ತರ ಭಾರತಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದ ಹಲವಾರು ಸಾವುನೋವುಗಳು ಸಂಭವಿಸಿವೆ. ಭೂಕುಸಿತಗಳಿಂದ ಹಲವಾರು ರಸ್ತೆಗಳು ನಿರ್ಬಂಧಗೊಂಡಿವೆ. ಹತ್ತಾರು ಸೇರುವೆಗಳು ಕೊಚ್ಚಿ ಹೋಗಿವೆ. ನೂರಾರು ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಇದು ಹಲವಾರು ನಗರ ಹಾಗೂ ಪಟ್ಟಣಗಳನ್ನು ಹಾನಿ ಮಾಡಿದೆ. ಕಾರುಗಳು, ಮನೆಗಳು ಹಾಗೂ ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿವೆ.
ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ 31 ಕ್ಕೆ ಏರಿದೆ. ನೆರೆಯ ಉತ್ತರಾಖಂಡದಲ್ಲಿ ಐದು ಮಳೆ ಸಂಬಂಧಿತ ಸಾವುಗಳು ವರದಿಯಾಗಿವೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಸಾವು ವರದಿಯಾಗಿದೆ.












Click it and Unblock the Notifications