Rain Alert: ಕರ್ನಾಟಕದಲ್ಲಿ ಜೂನ್-ಆಗಸ್ಟ್ ವರೆಗೆ ಅಧಿಕ ಮಳೆ ದಾಖಲು: ಕೊರತೆ ಆಗಿದ್ದೆಲ್ಲಿ?: KSNDMC ರಿಪೋರ್ಟ್
Karnataka Monsoon Rain Report: ಕರ್ನಾಟಕದ ಜನರು ಮುಂಗಾರು ಮಳೆ ಋತುವಿನ ಕಳೆದ ಮೂರು ತಿಂಗಳಲ್ಲಿ (ಜೂನ್-ಆಗಸ್ಟ್) ಅಧಿಕ ಮಳೆಗೆ ಸಾಕ್ಷಿಯಾಗಿದ್ದಾರೆ. ಈ ಅವಧಿಯಲ್ಲಿ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಕೊನೆ ಕೊನೆಗೆ ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲೂ ಮುಂಗಾರು ಆರ್ಭಟಿಸಿದೆ. ಈ ಮೂರು ತಿಂಗಳಲ್ಲಿ ನಿರಂತರ ಮಳೆ ಆದರೂ ಸಹಿತ ಮಲೆನಾಡಿಗೆ ಮಳೆ ಕೊರತೆ ಉಂಟಾಗಿದೆ. ಒಟ್ಟಾರೆ ನೋಡುವುದಾದರೆ ರಾಜ್ಯಕ್ಕೆ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.
ಹೌದು, ಸೋಮವಾರ ಪ್ರಕಟವಾದ ಅಧಿಕೃತ ಮುಂಗಾರು ಮಳೆಯ ವರದಿ ಪ್ರಕಾರ, ಕರ್ನಾಟಕದಲ್ಲಿ ಮುಂಗಾರು ಆರಂಭವಾದ ಜೂನ್ 01ರಿಂದ ಆಗಸ್ಟ್ 31ರವರೆಗೆ ವಾಡಿಕೆಗಿಂತ ಒಟ್ಟು ಶೇಕಡಾ 05ರಷ್ಟು ಅತ್ಯಧಿಕ ಮಳೆ ದಾಖಲಾಗಿದೆ. ಇದರಲ್ಲಿ ಉತ್ತರ ಒಳನಾಡಿಗೆ ಅಂದರೆ ವಿವಿಧ ಜಿಲ್ಲೆಗಳನ್ನು ಒಳಗೊಂಡ ಉತ್ತರ ಕರ್ನಾಟಕ ಭಾಗದಲ್ಲಿ ಈ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು (20% ಅಧಿಕ) ಮಳೆ ಆಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡು ಭಾಗದಲ್ಲಿ ಈ ವರ್ಷ ಮುಂಗಾರು ಋತುವಿನ ಮೂರು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು (10% ಅಧಿಕ) ಮಳೆ ಬಿದ್ದಿದೆ. ಇನ್ನೂ ಕರಾವಳಿ ಕರ್ನಾಟಕದಲ್ಲಿ ವಾಡಿಕೆಗಿಂತ ಕೇವಲ ಶೇಕಡಾ (%3 ಅಧಿಕ) ಮಳೆ ದಾಖಲಾಗಿದೆ. ಈ ಭಾಗದಲ್ಲಿ ಸೆಪ್ಟಂಬರ್ ತಿಂಗಳಲ್ಲೂ ಅಧಿಕ ಮಳೆ ನಿರೀಕ್ಷೆ ಇದೆ.
ರಾಜ್ಯದ ಮಲೆನಾಡಿನಲ್ಲಿ ಇದೇ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ. ಅಂದರೆ ಇಲ್ಲಿ 6% ರಷ್ಟು ಕಡಿಮೆ ಮಳೆ ದಾಖಲಾಗಿದೆ. ಸೆಪ್ಟಂಬರ್‌ನಲ್ಲಿ ಈ ಮಳೆ ಕೊರತೆ ನೀಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಜೂ.1-ಆ.31ರತನಕ ದಾಖಲಾದ ಮಳೆ, ವಾಡಿಕೆ ವಿವರ
* ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಮಳೆ ಪ್ರಮಾಣ 233 ಮಿ.ಮೀ. ನಿರೀಕ್ಷೆ ಇತ್ತು. ಸದ್ಯ 256 ಮಿ.ಮೀ ದಾಖಲಾಗಿದ್ದು, ಇದರಿಂದ ಶೇಕಡಾ 10 ರಷ್ಟು ಅಧಿಕವಾದಂತಾಗಿದೆ.
* ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ 337 ಮಿ.ಮಿ. ಆಗಬೇಕಿತ್ತು. ಸದ್ಯ 404 ಮಿ.ಮೀ. ಮಳೆ ಆಗಿದೆ ಅಂದರೆ ವಾಡಿಕೆಗಿಂತ ಇದು ಶೇಕಡಾ 20ರಷ್ಟು ಹೆಚ್ಚು.
* ಮಲೆನಾಡು ಭಾಗದಲ್ಲಿ ವಾಡಿಕೆ ಮಳೆ 1377 ಮಿ.ಮಿ. ನಿರೀಕ್ಷೆಗಿಂತ 1294 ಮಿ.ಮಿ. ಕಡಿಮೆ ಮಳೆ ಕಂಡು ಬಂದಿದೆ. ಅಂದರೆ ವಾಡಿಕೆಗಿಂತ ಶೇಕಡಾ 06ರಷ್ಟು ಕೊರತೆ ಉಂಟಾಗಿದೆ.
* ಇನ್ನೂ ಕರಾವಳಿ ಭಾಗದಲ್ಲಿ ವಾಡಿಕೆ 2796 ಮಿ.ಮೀ. ಮಳೆ ಆಗಬೇಕಿದ್ದು, ಸದ್ಯ 2890 ಮಿ.ಮಿ. ಹೆಚ್ಚು ಮಳೆ ದಾಖಲಾಗಿದೆ. ಇದು ವಾಡಿಕೆಗಿಂತ ಶೇಕಡಾ 03ರಷ್ಟು ಅಧಿಕ ಎಂದು ಹವಾಮಾನ ತಜ್ಞರು ಸೋಮವಾರದ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದಾದ್ಯಂತ 5% ಅಧಿಕ ಮಳೆ: KSNDMC
ದಕ್ಷಿಣ, ಉತ್ತರ, ಮಲೆನಾಡು ಹಾಗೂ ಕರಾವಳಿ ಭಾಗದ ಎಲ್ಲ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕದಲ್ಲಿ ಜೂನ್ 01 ರಿಂದ ಆಗಸ್ಟ್ 31ರವರೆಗೆ ವಾಡಿಕೆ 691 ಮಿ.ಮೀ. ಮಳೆ ಆಗಬೇಕಿತ್ತು. ವಾಸ್ತವದಲ್ಲಿ ವಾಡಿಕೆಗಿಂತ ಬರೋಬ್ಬರಿ 725 ಮಿ.ಮೀ. ಅಧಿಕ ಮಳೆ (ಶೇಕಡಾ 05) ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಳೆ ಹವಾಮಾನ ವರದಿಯಲ್ಲಿ ತಿಳಿಸಿದೆ.
ಸ್ಟ್ರಫ್, ವಾಯುಭಾರ ಕುಸಿತದಂತಹ ವೈಪರೀತ್ಯಗಳ ಪರಿಣಾಮವಾಗಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಸೆಪ್ಟಂಬರ್ ತಿಂಗಳಲ್ಲೂ ಸಹ ಕರಾವಳಿ ಹಾಗೂ ಮಲೆನಾಡಿಗೆ ಸಾಧಾರಣದಿಂದ ಭಾರೀ ಮತ್ತು ಅತ್ಯಧಿಕ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೆಚ್ಚಿನ ಮಾಹಿತಿಗೆ...
* ಮಲೆನಾಡು ಭಾಗ/ಜಿಲ್ಲೆಗಳು: ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ.
* ಕರಾವಳಿ ಭಾಗ/ಜಿಲ್ಲೆಗಳು: ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ.
* ದಕ್ಷಿಣ ಒಳನಾಡು ಭಾಗ/ಜಿಲ್ಲೆಗಳು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿ.
* ಉತ್ತರ ಒಳನಾಡು ಭಾಗ/ಜಿಲ್ಲೆಗಳು: ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್.












Click it and Unblock the Notifications