Karnataka Rains: ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಣಬಿಸಿಲು ಮುಂದುವರೆದಿದೆ. ಈ ನಡುವೆಯೇ ಹಲವೆಡೆ ಮಳೆ ಆಗುತ್ತಿದೆ. ಹಾಗೆಯೇ ಇಂದು (ಏಪ್ರಿಲ್ 4) ಮುಂದಿನ ಮೂರು ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಇಲ್ಲಿದೆ ನೋಡಿ ಮಾಹಿತಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದಿಂದ ಸಂಜೆವರೆಗೂ ಬಿಸಿಲಿನ ವಾತಾವರಣ ಇತ್ತು. ಆದರೆ ರಾತ್ರಿ ವೇಳೆಗೆ ನಗರದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಈಗಾಗಲೇ ಮೊನ್ನೆ ನಗರದಲ್ಲಿ ಮಳೆರಾಯ ಆರ್ಭಟಿಸಿ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ.

ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗಿವ ಸಾಧ್ಯತೆಯಿದೆ. ಜೊತೆಗೆ ಗಾಳಿಯ ವೇಗ ಗಂಟೆಗೆ 30-60 ಕಿಲೋ ಮೀಟರ್‌ವರೆಗೆ ತಲುಪುವ ಸಾಧ್ಯತೆಯಿದೆ. ಅದರಲ್ಲೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ನೀಡಿರುವ ಬೆಂಗಳೂರಿನ, ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಈ ಮಳೆಯಿಂದಾಗಿ ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ವ್ಯತ್ಯಯ, ಸಣ್ಣಪುಟ್ಟ ಸಂಚಾರ ದಟ್ಟಣೆ ಮತ್ತು ದುರ್ಬಲ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿದೆ.
ಬಿರುಗಾಳಿ ಜೊತೆ ಮಳೆ ಸುರಿದರೆ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಆಗಬಹುದು ಮತ್ತು ಕೆಲವೆಡೆ ಚರಂಡಿಗಳು ತುಂಬಿ ಹರಿಯುವ ಸಂಭವವೂ ಇದೆ. ಆದ್ದರಿಂದ, ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಮರಗಳ ಕೆಳಗೆ ಆಶ್ರಯ ಪಡೆಯದಂತೆ ಎಚ್ಚರಿಕೆ ನೀಡಲಾಗಿದೆ. ಮಿಂಚು ಮತ್ತು ಗಾಳಿಯಿಂದ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿರುತ್ತದೆ ಆದ್ದರಿಂದ ಇದನ್ನಯ ಸನುಸರಿಸಿದ್ರೆ ಉತ್ತಮ. ಅಲ್ಲದೆ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಆಫ್ ಮಾಡಿ, ವಿದ್ಯುತ್ ಶಕ್ತಿಯನ್ನು ಸಂಪರ್ಕಿಸುವ ವಸ್ತುಗಳಿಂದ ಆದಷ್ಟು ದೂರವಿರಿ ಎಂದು ಸಲಹೆ ನೀಡಲಾಗಿದೆ.
ವಾಹನ ಸವಾರರು ಮಳೆ ಬಂದಂತಹ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ರಸ್ತೆಯಲ್ಲಿ ನೀರು ನಿಂತಿದ್ದರೆ ಅಲ್ಲಿ ಹೋಗಬೇಡಿ. ಈ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರಿಂದ ಅಪಾಯಗಳನ್ನು ತಪ್ಪಿಸಬಹುದಾಗಿದೆ. ಇದನ್ನು ಜನರು ಗಮನದಲ್ಲಿಟ್ಟುಕೊಂಡು ಪಾಲಿಸಿದ್ರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಇದೀಗ ಮುಂಗಾರು ಪೂರ್ವ ಮಳೆ ಆರ್ಭಟಿಸುತ್ತಿದೆ. ಇನ್ನೂ ಕೆಲವು ತಿಂಗಳಲ್ಲೇ ಮುಂಗಾರು ಆರ್ಭಟಿಸಲಿದ್ದು, ಈ ವೇಳೆಯೇ ಇಂತಹ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಈಗಿನಿಂದಲೇ ಮುಂಜಾಗ್ರತಾ ಕ್ರಮವಾಗಿ ಈ ಸಲಹೆಗಳನ್ನು ನೀಡಲಾಗಿದೆ.












Click it and Unblock the Notifications