Karnataka Rain Update: ಕರ್ನಾಟಕದ ಈ ಭಾಗಗಳಲ್ಲಿ ಆಗಸ್ಟ್ 31ರವರೆಗೆ ಮಳೆ ಅರ್ಭಟ..
ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಟ್ಟು ಬಿಡದೆ ಧಾರಾಕಾರ ಮಳೆ ಮುಂದುವರೆದಿದೆ. ಇಂದು ಕೂಡ ಹವಾಮಾನ ಇಲಾಖೆ ಕರ್ನಾಟಕದ ಹಲವೆಡೆ ಮಳೆ ಮುನ್ಸೂಚನೆಯನ್ನು ನೀಡಿದೆ. ಕರಾವಳಿ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಈ ಭಾಗದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.
ಮಲೆನಾಡು ಸುತ್ತಮುತ್ತ ಚದುರಿದಂತೆ ಸಾಧಾರಣ ಮಳೆಯಾದರೆ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು ಕೆಲವೆಡೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಜಿಲ್ಲೆಗಳಲ್ಲಿ ಆಗಸ್ಟ್ 31ರವರೆಗೆ ಅಧಿಕ ಮಾಳೆಯಾಗಲಿದೆ. ಈ ಸಮಯದಲ್ಲಿ ಗಾಳಿಯ ವೇಗ ಎಂದಿಗಿಂತ ಹೆಚ್ಚಾಗಿರಲಿದ್ದು ಪ್ರತೀ ಗಂಟೆಗೆ 30-40ಕಿಮೀ ತಲುಪುವ ಸಾಧ್ಯತೆಯಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಜನ ವಿನಾಕಾರಣ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.

ಚಿಕ್ಕಬಳ್ಳಾಪುರ, ಬಳ್ಳಾರಿ, ಕೋಲಾರ, ಮಂಡ್ಯ, ರಾಮನಗರ, ವಿಜಯನರ, ಬೆಂಗಳೂರು ನಗರ, ಬೆಂಗಳೂರು, ಗ್ರಾಮಾಂತರ, ಚಾಮರಾಜನಗರ, ಮೈಸೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ ಹೀಗೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರರಣದಿಂದ ಹಗುರವಾಗಿ ಮಳೆ ಬೀಳಲಿದೆ. ಅಲ್ಲದೆ ಬೀದರ್, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗಲಿದೆ.
ಕೊಡಗು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಆಗಸ್ಟ್ 31ರವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದ್ದು ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ ಮೂರ್ನಾಲ್ಕು ದಿನ ಅಂದರೆ ಆಗಸ್ಟ್ 31ರವರೆಗೆ ಮಳೆ ಬೀಳಲಿದೆ. ವಿಜಯಪುರ, ಧಾರವಾಡ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆಯಾಗಲಿದೆ. ಹಾಗಾದರೆ ದೇಶದಲ್ಲಿ ಯಾವ ಭಾಗಗಳಲ್ಲಿ ಮಳೆಯಾಗಲಿದೆ ಎಂದು ತಿಳಿಯೋಣ.

ಇಂದು 22 ರಾಜ್ಯಗಳಲ್ಲಿ ಭಾರೀ ಮಳೆಯ ಹಳದಿ ಎಚ್ಚರಿಕೆ
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಾಯುವ್ಯದಿಂದ ಪಶ್ಚಿಮ, ಮಧ್ಯ ಮತ್ತು ಈಶಾನ್ಯ ಭಾರತದವರೆಗೆ ಭಾರೀ ಮಳೆಯಾಗುತ್ತಿದೆ. ಗುಜರಾತ್ ಮತ್ತು ಪಶ್ಚಿಮ ರಾಜಸ್ಥಾನ ಧಾರಾಕಾರ ಮಳೆಗೆ ಪ್ರವಾಹವನ್ನು ಎದುರಿಸುತ್ತಿದೆ. ಎರಡೂ ರಾಜ್ಯಗಳ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಅಧಿಕ ಮಳೆಗೆ ಗುಜರಾತ್‌ನಲ್ಲಿ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. 15,000 ಕ್ಕೂ ಹೆಚ್ಚು ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದ್ದು, ನೀರಿನಿಂದ ಸುತ್ತುವರಿದ ಪ್ರದೇಶಗಳಲ್ಲಿ 300 ಜನರನ್ನು ರಕ್ಷಿಸಲಾಗಿದೆ. ದೇವಭೂಮಿ ದ್ವಾರಕಾ, ಆನಂದ್, ವಡೋದರಾ, ಖೇಡಾ, ಮೊರ್ಬಿ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಹವಾಮಾನ ಇಲಾಖೆಯು 22 ರಾಜ್ಯಗಳಲ್ಲಿ ಬುಧವಾರ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ.
ಸತತ ಮೂರನೇ ದಿನವೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಹಮದಾಬಾದ್‌ನಲ್ಲಿ ಹಲವೆಡೆ ವಾಹನ ಮತ್ತು ರೈಲು ಸಂಚಾರ ರದ್ದುಗೊಳಿಸಲಾಗಿದೆ. ಪಂಚಮಹಲ್, ನವಸಾರಿ, ವಲ್ಸಾದ್, ವಡೋದರಾ, ಭರೂಚ್, ಖೇಡಾ, ಗಾಂಧಿನಗರ, ಬೊಟಾಡ್ ಮತ್ತು ಅರಾವಳಿ ಜಿಲ್ಲೆಗಳಲ್ಲಿ ಅಣೆಕಟ್ಟುಗಳು ಮತ್ತು ನದಿಗಳ ನೀರಿನ ಮಟ್ಟ ಏರಿಕೆಯಿಂದಾಗಿ ಆರು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ & #ಎಚ್ಚರಿಕೆಗಳು:(ಮೂಲ:IMD)
— Karnataka State Natural Disaster Monitoring Centre (@KarnatakaSNDMC) August 28, 2024
ರಾಜ್ಯದ ಕರಾವಳಿ & ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಗುಡುಗು ಮಿಂಚು ಸಹಿತ ಜೋರಾದ ಗಾಳಿಯೊಂದಿಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ & ಅತಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ, IMD ಯಿಂದ #ಆರೆಂಜ್ಅಲರ್ಟ್ ನೀಡಲಾಗಿದೆ. pic.twitter.com/mu9xYaW6Zn
ಗುಜರಾತ್-ರಾಜಸ್ಥಾನದಲ್ಲಿ ಪ್ರವಾಹ
ಗುಜರಾತ್ ಪಕ್ಕದಲ್ಲಿರುವ ರಾಜಸ್ಥಾನದ ಉತ್ತರ ಭಾಗದಲ್ಲೂ ಭಾರಿ ಮಳೆಯಾಗುತ್ತಿದೆ. ಜೈಪುರ, ಉದಯಪುರ, ಬನ್ಸ್ವಾರಾ ಮತ್ತು ಡುಂಗರ್‌ಪುರ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗಿದೆ. ಜಮ್ಮುವಿನ ರಾಜೋರಿಯಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ರಾಂಬನ್‌ನಲ್ಲಿ ಮೇಘಸ್ಫೋಟದ ನಂತರ ನಾಪತ್ತೆಯಾಗಿದ್ದ ಏಳು ಜನರಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.
ಇಂದು ಮತ್ತು ನಾಳೆ ಈ ರಾಜ್ಯಗಳಲ್ಲಿ ಎಚ್ಚರಿಕೆ
ಮುಂದಿನ ಎರಡು ದಿನಗಳ ಕಾಲ ಗುಜರಾತ್‌ನಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಪಶ್ಚಿಮ ರಾಜಸ್ಥಾನ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಬುಧವಾರ ಮತ್ತು ಪಶ್ಚಿಮ ರಾಜಸ್ಥಾನ, ಕೇರಳ ಮತ್ತು ಒಡಿಶಾದಲ್ಲಿ ಗುರುವಾರ ಮಳೆಯಾಗುವ ಬಗ್ಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಇದೇ ವೇಳೆ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ 22 ರಾಜ್ಯಗಳು, ಒಡಿಶಾದ ಕೆಲವು ಪ್ರದೇಶಗಳು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳದ ಬಹುತೇಕ ಭಾಗಗಳು ಮತ್ತು ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಬುಧವಾರ ಮಳೆಯ ಬಗ್ಗೆ ಹಳದಿ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications