Karnataka Rain: ಅಕ್ಟೋಬರ್ 10ರವರೆಗೆ ರಾಜ್ಯದ ಮಳೆ ವರದಿ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅಕ್ಟೋಬರ್ 10 ರವರೆಗೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಲಿದೆ ಎಂದು ಹೇಳಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಚದುರಿದಂತೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.
ಕೊಡಗು ಜಿಲ್ಲೆಯಲ್ಲಿ ಕೂಡ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಕಾವೇರಿ ಜಲಾನಯನದ ಪ್ರದೇಶದ ಜನರಲ್ಲಿ ಸ್ವಲ್ಪ ನೆಮ್ಮದಿ ತರಿಸಿದೆ.

ಭಾನುವಾರ ಈ ಪ್ರದೇಶಗಳಲ್ಲಿ ಉತ್ತಮ ಮಳೆ
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ 165 ಮಿಮೀ ಮಳೆಯಾಗಿದ್ದು ರಾಜ್ಯದಲ್ಲೇ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಗೋಣಿಕೊಪ್ಪಲು 93 ಮಿಮೀ, ಕಾರಿಕೆ 46 ಮಿಮೀ, ಪೊನ್ನಂಪೇಟೆ 36.8 ಮಿಮೀ, ಮಡೆ 33 ಮಿಮೀ, ಮಾಯಮುಡಿ 32 ಮಿಮೀ, ನಂಜರಾಯಪಟ್ಟಣ 24 ಮಿಮೀ, ಚೆಂಬು 22 ಮಿಮೀ ಮಳೆಯಾಗಿದೆ.
ಬೀದರ್ ಜಿಲ್ಲೆಯ ದೋನಾಗಾವಿ 59 ಮಿಮೀ, ಇಸ್ಲಾಂಪುರ 52 ಮಿಮೀ ಮಳೆಯಾಗಿದೆ. ಬೆಂಚಿಂಚೋಲಿ, ಗುಂಡೂರು, ಧುಮ್ಮನುಸೂರು, ಅಲಗೂಡ, ಮಾಣಿಕ್‌ನಗರ್ ನಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೇಪು, ಕೊಳ್ತಿಗೆ, ಮಂಚಿ, ಧರ್ಮಸ್ಥಳ, ಸುಳ್ಯದಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ರಾಜ್ಯದ ಜಿಲ್ಲೆಗಳ ಮಳೆ ಮುನ್ಸೂಚನೆ
ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಕೂಡ ಚದುರಿದಂತೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ.
ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಚದುರಿದಂತೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹಾಸನ, ವಿಜಯಪುರ, ಹಾವೇರಿ, ಮೈಸೂರು, ಕೋಲಾರ, ಧಾರವಾಡ, ಚಾಮರಾಜನಗರ, ಮಂಡ್ಯ, ದಾವಣಗೆರೆ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕೊಪ್ಪಳ, ಬೆಂಗಳೂರು ಗ್ರಾಮಾಂತರ, ವಿಜಯನಗರ, ರಾಮನಗರ, ಬೆಂಗಳೂರು ನಗರ, ಗದಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications