Rain Alert: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹಿಂಗಾರು ಉತ್ತಮವಾಗಿದ್ದು ಸ್ವಲ್ಪ ಭರವಸೆ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಭಾನುವಾರ ಮತ್ತು ಸೋಮವಾರ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಭಾನುವಾರ ಮತ್ತು ಸೋಮವಾರ ಹಳದಿ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಶನಿವಾರ ರಾಜ್ಯದಲ್ಲಿ ಸುರಿದ ಮಳೆ ವಿವರ
ಮೈಸೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರಿನಲ್ಲಿ 82.5 ಮಿ.ಮೀ ಮಳೆಯಾಗಿದ್ದು, ರಾಜ್ಯದಲ್ಲಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಚಿಕ್ಕಕೆರೆಯೂರು 73 ಮಿ.ಮೀ, ಸಾವ್ವೆ 69.5 ಮಿ.ಮೀ, ಹುನಗೋಡು 65 ಮಿ.ಮೀ, ತಟ್ಟೆಕೆರೆ 63.5 ಮಿ.ಮೀ, ಉದ್ಬೂರುಕಾವಲ್ 63.5 ಮಿ.ಮೀ ಮಳೆಯಾಗಿದೆ.
ಕೋಲಾರ ಜಿಲ್ಲೆಯ ಅಮ್ಮನಲ್ಲೂರಿನಲ್ಲಿ 75 ಮಿ.ಮೀ, ಪಿಚ್ಚಗುಂಟನಹಳ್ಳಿ 71 ಮಿ.ಮೀ, ಚನ್ನಚಂದ್ರದಲ್ಲಿ 63 ಮಿ.ಮೀ ಮಳೆಯಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರದ ಗುಮನಹಳ್ಳಿಯಲ್ಲಿ 69.5 ಮಿ.ಮೀ, ಹೊನಗಾನಹಳ್ಳಿಯಲ್ಲಿ 65.5 ಮಿ.ಮೀ ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ 63.5 ಮಿಮೀ, ದಕ್ಷಿಣ ಕನ್ನಡ 59 ಮಿ.ಮೀ, ಉಡುಪಿ 58.5 ಮಿ.ಮೀ, ಬೆಂಗಳೂರು ಗ್ರಾಮಾಂತರ 57.5 ಮಿ.ಮೀ, ಚಾಮರಾಜನಗರ 55.5 ಮಿ.ಮೀ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 47 ಮಿ.ಮೀ, ರಾಮನಗರ ಜಿಲ್ಲೆ 45 ಮಿಮೀ, ತುಮಕೂರು ಜಿಲ್ಲೆಯಲ್ಲಿ 38 ಮಿಮೀ ಮಳೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ತಂದಿದೆ, ಹೀಗೆ ಮಳೆ ಮುಂದುವರೆದರೆ ಕೆಆರ್ ಎಸ್ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಕೂಡ ಭಾನುವಾರ ಸಂಜೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಸೋಮವಾರ ಕೂಡ ಚದುರಿದಂತೆ ಸಾಧಾರಣ ಮಳೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications