Karnataka Rain: ಮೂರು ದಿನ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ದಕ್ಷಿಣ ಒಳನಾಡಿನ ಹವಾಮಾನ ವರದಿ
ಜುಲೈ ತಿಂಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆ, ತಿಂಗಳಾಂತ್ಯದಲ್ಲಿ ಬಿಡುವುಕೊಟ್ಟಿತ್ತು. ಆಗಸ್ಟ್ 3ರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮತ್ತೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಆಗಸ್ಟ್ 3 ರಿಂದ 5ರವರೆಗೆ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ಇತರೆ ಜಿಲ್ಲೆಗಳ ಪ್ರದೇಶಗಳಲ್ಲೂ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 5ರ ನಂತರ ಮಳೆ ಮತ್ತಷ್ಟು ಚುರುಕಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಮೂರು ಜಿಲ್ಲೆಗಳಿಗೆ ಹೊರತುಪಡಿಸಿ ಉಳಿದ ಯಾವುದೇ ಜಿಲ್ಲೆಗಳಿಗೂ ಭಾರಿ ಮಳೆಯ ಎಚ್ಚರಿಕೆ ನೀಡಿಲ್ಲ. ಮಲೆನಾಡು ಜಿಲ್ಲೆಗಳಲ್ಲಿ ಕೂಡ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಎಲ್ಲಾ ಜಿಲ್ಲೆಗಳ ಮಳೆ ಮುನ್ಸೂಚನೆ
ಕಲಬುರಗಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಯಾದಗಿರಿ, ಬೆಳಗಾವಿ, ಬೀದರ್,
ರಾಯಚೂರು, ಬಳ್ಳಾರಿ, ವಿಜಯನಗರ, ವಿಜಯಪುರ, ಹಾವೇರಿ, ಕೊಪ್ಪಳ, ಗದಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಧಾರವಾಡ, ಬೆಂಗಳೂರು ನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ, ಬಾಗಲಕೋಟೆ, ಕೋಲಾರ, ಚಾಮರಾಜನಗರ, ರಾಮನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿಗೆ ಮಳೆ ಕೊರತೆ
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು ಆತಂಕದ ವಾತಾವರಣ ಮೂಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು ಬರದ ಆತಂಕ ಎದುರಾಗಿದೆ.
ಮಳೆ ಕಡಿಮೆಯಾದ ಕಾರಣ ರಾಜ್ಯದ ಜಲಾಶಯಗಳಿಗೆ ಒಳ ಹರಿವು ಕಡಿಮೆಯಾಗಿದೆ. ಉಕ್ಕಿ ಹರಿಯುತ್ತಿದ್ದ ಹಲವು ನದಿಗಳು ಶಾಂತವಾಗಿವೆ. ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಆತಂಕ ಮೂಡಿಸಿದ್ದ ಸಂದರ್ಭದಲ್ಲೇ ಉತ್ತಮ ಮಳೆ ಸುರಿದ ಕಾರಣ ಜಲಾಶಯದ ಮಟ್ಟ 110 ಅಡಿಗೆ ಏರಿದ್ದು ಜನರಲ್ಲಿ ಆತಂಕ ದೂರವಾಗಿಸಿದೆ.
ಜೂನ್-ಜುಲೈ ತಿಂಗಳಿನಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರೆದಿದ್ದು ಮುಂಗಾರು ಬೆಳೆಗಳ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಕೂಡ ಮಳೆ ಕೊರತೆಯಾದರೆ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಉಂಟಾಗಲಿದೆ.












Click it and Unblock the Notifications