KSRTC: ರಾಜ್ಯ ಸಾರಿಗೆ ನೌಕರರಿಂದ 'ಬೆಂಗಳೂರು ಚಲೋ', ಗಮನಿಸಿ
ಹುಬ್ಬಳ್ಳಿ, ಮಾರ್ಚ್ 02: ಅನೇಕ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಾರಿಗೆ ನೌಕರರು 2020 ಡಿಸೆಂಬರ್ ಮತ್ತು ಎಪ್ರಿಲ್ 2021 ರಲ್ಲಿ ಮುಷ್ಕರ ಮಾಡಿದ್ದರು. ಕೇವಲ ಪ್ರತಿಭಟನೆಯಷ್ಟೇ ಅಲ್ಲದೇ ಬಸ್ ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಈಗ ಸಾರಿಗೆ ನೌಕರರು ಮತ್ತೆ ಹೋರಾಟಕ್ಕೆ ಮುಂದಾಗಿದ್ದು, 'ಬೆಂಗಳೂರು ಚಲೋ' ಗೆ ಕರೆ ನೀಡಿದ್ದಾರೆ.
ಸಾರಿಗೆ ನೌಕರರಿಗೂ ಸಮಾನ ವೇತನ ನೀಡಬೇಕು, ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಅದಕ್ಕಾಗಿ ಮುಷ್ಕರ ಸಹ ಮಾಡಿದ್ದರು. ಆದರೆ ಅಂದಿನ ಸಾರಿಗೆ ನೌಕರರ ಮೂಗಿಗೆ ತುಪ್ಪ ಸವರಿ ಕೈತೊಳೆದಕೊಂಡಿತ್ತು.

ಸಾರಿಗೆ ನೌಕರರ ಬೇಡಿಕೆಗಳು ಬೇಡಿಕೆಯಾಗಿಯೇ ಉಳಿದ ಪರಿಣಾಮ ಅವರು ಇದೇ ಮಾರ್ಚ್ 4 'ಬೆಂಗಳೂರು ಚಲೋ' ಹೋರಾಟ ನಡೆಸಲಿದ್ದಾರೆ. ಬೆಂಗಳೂರು ಚಲೋ ಕಾರ್ಯಕ್ರಮ ಮಾಡಿ, ಅಹೋರಾತ್ರಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ.
4 ನಿಗಮದ ನೌಕರರಿಂದ ಹೋರಾಟ
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಮಾನ ಮನಸ್ಕರ ವೇದಿಕೆಯ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ಚಲೋ ಬಗ್ಗೆ ವಿವರಿಸಿದರು. ಎಲ್ಲ ನಾಲ್ಕು ನಿಗಮಗಳ ನೌಕರ/ಸಿಬ್ಬಂದಿಯಿಂದ 'ಬೆಂಗಳೂರು ಚಲೋ' ನಡೆಯಲಿದೆ ಎಂದರು.
ಸಾರ್ವಜನಿಕರ ಅಗತ್ಯ ಸೇವೆಯಾದ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಸಾರಿಗೆ ಸಂಸ್ಥೆಯ ನೌಕರರು ದಿನಪೂರ್ತಿ ಕರ್ತವ್ಯ ನಿರ್ವಹಿಸಬೇಕು. ಮನೆಗಳನ್ನು ಬಿಟ್ಟು 2-3 ದಿನ ದೂರದ ಊರುಗಳಿಗೆ ಹೋಗಿ ಹಗಲು-ರಾತ್ರಿ ಎನ್ನದೆ ದುಡಿಯುತ್ತಾರೆ. ನಮ್ಮ ವೈಯಕ್ತಿಕ ಬದುಕು ಹಾಳಾಗುವುದರ ಜೊತೆಗೆ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಸಾರಿಗೆ ನೌಕರರ ಪರಿಶ್ರಮದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶ್ವದಲ್ಲೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಏಕೈಕ ಸಂಸ್ಥೆಯಾಗಿದೆ.
ನೌಕರರಿಗೆ ಆಗುವತ್ತಿರುವ ಸಮಸ್ಯೆಗಳೇನು?
ಸಾರಿಗೆ ನೌಕರರಿಗೆ ನೀಡುತ್ತಿರುವ ಮಾಸಿಕ ವೇತನ ಇತರೆ ಇಲಾಖೆಗಳ ನೌಕರರಿಗೆ ಹೋಲಿಕೆ ಮಾಡಿದರೆ ತುಂಬಾ ಕಡಿಮೆ. ಒಂದೇ ಸಮಾಜದಲ್ಲಿ ಜೀವನ ಸಾಗಿಸುತ್ತಿರುವ ನಮಗೆ ವೇತನ ತಾರತಮ್ಯ ಮಾಡಲಾಗುತ್ತಿದೆ ಎಂದು ವೇದಿಕೆ ಸದಸ್ಯರು ದೂರಿದರು.
ವೇತನ ವ್ಯತ್ಯಾಸದಿಂದ ನಮ್ಮ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸಲು, ಅವರ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ. ದುಬಾರಿ ಕಾಲದಲ್ಲಿ ಪರದಾಡುವ ಪರಿಸ್ಥಿತಿ ಇದೆ. ದಿನದ 24 ಗಂಟೆಗಳು ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಬಹುತೇಕ ನೌಕರರು ನಿವೃತ್ತಿ ಪೂರ್ವದಲ್ಲೇ ನಿಧನ ಹೊಂದುತ್ತಿದ್ದಾರೆ.
ಸಾರಿಗೆ ನಿಗಮಗಳ ನೌಕರರಿಗೆ ನಿವೃತ್ತಿ ನಂತರ ಕೇವಲ 3000 ರಿಂದ 3500 ಪಿಂಚಣಿ ಮಾತ್ರ ನೀಡಲಾಗುತ್ತಿದೆ. ಇಷ್ಟು ಹಣ ಔಷಧಿಗಳ ಖರೀದಿಗೂ ಸಾಲುವುದಿಲ್ಲ. ಇಷ್ಟೆಲ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿರುವ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆ ಬಗ್ಗೆ ಪ್ರಶ್ನಿಸಿದರೆ ನೌಕರರ ವಜಾ, ವರ್ಗಾವಣೆ, ಆಮಾನತ್ತು ಮತ್ತು ನೌಕರರು ಹಾಗೂ ಕುಟುಂಬ ಸದಸ್ಯರ ಮೇಲೆ ಸುಳ್ಳು ಪೋಲಿಸ್ ಕೇಸು ದಾಖಲಿಸಿದೆ ಎಂದು ಅಳಲು ತೋಡಿಕೊಂಡರು.

ಕಾಂಗ್ರೆಸ್ ಪ್ರಣಾಳಿಕೆ ಭರವಸೆ ಈಡೇರಿಲ್ಲ
ರಾಜ್ಯದಲ್ಲಿ ಸರ್ಕಾರ ಬಂದು ಸುಮಾರು 10 ತಿಂಗಳುಗಳು ಕಳೆದರು ನಮ್ಮ ಯಾವುದೇ ಸಮಸ್ಯೆಗಳು ಬಗೆಹರಿಸಿಲ್ಲ. ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಇದೆಲ್ಲ ಕಾರಣಗಳಿಂದ ಮನೆಯ ಮಕ್ಕಳೊಂದಿಗೆ ಆಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ.
ನೌಕರರ ಈ ಹೋರಾಟದಿಂದ ರಾಜ್ಯದಲ್ಲಿ ಮುಂದೆ ಆಗುವ ಎಲ್ಲ ವಿಧದ ಬೆಳವಣಿಗೆಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಸಾರಿಗೆ ಸಿಬ್ಬಂದಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಮಗೆ ಕಾರ್ಮಿಕರ ವಿರುದ್ಧವಾಗಿ ಕೈಗೊಂಡ ಎಲ್ಲಾ ಶಿಸ್ತಿನ ಕ್ರಮ, ಡಿಸ್ಮಿಸಲ್ಸ್ ಮತ್ತು ಪೋಲಿಸ್ ಎಫ್.ಐ.ಆರ್ ಪ್ರಕರಣಗಳನ್ನು ರದ್ದು ಮಾಡಬೇಕು. ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು.
ಹಿಂಬಾಕಿ ಪಾವತಿಗೆ ಆಗ್ರಹ
2020 ರ ಜನವರಿ 01 ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿ ಪಾವತಿಸಬೇಕು. ಮುಖ್ಯವಾಗಿ 2020 ರಿಂದ ನಿವೃತ್ತಿಯಾದ ನೌಕರರಿಗೆ ಅದೇ ದಿನಾಂಕದಿಂದ ವೇತನ ವಿಮರ್ಷೆ ಮಾಡಿ ಬಾಕಿ ಹಣ ಮತ್ತು ಹಿಂಬಾಕಿ ಮೊತ್ತ ತ್ವರಿತವಾಗಿ ಪಾವತಿಸಬೇಕು.
ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮತ್ತು ಸವಲತ್ತುಗಳನ್ನು ಸಾರಿಗೆ ನೌಕರರಿಗೂ ವಿಸ್ತರಿಸಬೇಕು. ಸಾರಿಗೆ ನೌಕರರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಬೇಕು ಎಂದು ಅವರು ಸಾರಿಗೆ ನೌಕರರು ಆಗ್ರಹಿಸಿದರು.












Click it and Unblock the Notifications