ಚಾಮುಂಡೇಶ್ವರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಸಿದ್ದು ಕಿಡಿ: ಅವನೊಬ್ಬ ಮೋಸಗಾರ ಎಂದ ಸಿದ್ದರಾಮಯ್ಯ
ಮೈಸೂರು, ಮೇ 11: ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅವನೊಬ್ಬ ಮೋಸಗಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡ ಬಳಿಕ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಒಬ್ಬ ಮೋಸಗಾರ ಎಂದು ಕಿಡಿಕಾರಿದ್ದಾರೆ.

ಅವನೊಬ್ಬ ಮೋಸಗಾರ. ಅವನು ಇಂಥವನು ಅಂತ ಗೊತ್ತಿದ್ದರೆ ನಮ್ಮ ಹುಡುಗನನ್ನೇ ನಿಲ್ಲಿಸುತ್ತಿದೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದೇಗೌಡ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.
ಇನ್ನೂ ಬುಧವಾರವಷ್ಟೇ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮೇ 13ಕ್ಕೆ ಬಹುನಿರೀಕ್ಷಿತ ಫಲಿತಾಂಶ ಹೊರಬೀಳಲಿದ್ದು, ಹಲವು ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಗೆಲುವಿನ ಸಮೀಪದಲ್ಲಿದೇ ಎಂದು ವರದಿಯಾಗಿದೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಒಪ್ಪಿಕೊಂಡಂತಾಗಿದೆ.
ಈ ಬಾರಿ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡರನ್ನ ಸೋಲಿಸಲು ಕಾಂಗ್ರೆಸ್ ತಯಾರಿ ನಡೆಸಿದ್ದುಮ ಅದರಂತೆ ಚಾಮುಂಡೇಶ್ವರಿ ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಮಾವಿನಹಳ್ಳಿ ಸಿದ್ದೇಗೌಡ ಕಣಕ್ಕಿಳಿಸಿದ್ದರು. ಸಿದ್ದೇಗೌಡ ಮತ್ತು ಅವರ ತಂಡ ಜಿ.ಟಿ. ದೇವೇಗೌಡರ ನಡೆಯಿಂದ ಬೇಸತ್ತು, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಜಿ.ಟಿ ದೇವೇಗೌಡರನ್ನು ಶತಾಯಗತಾಯ ಮಣಿಸಲೇ ಬೇಕು ಅಂತ ಮಾವಿನಹಳ್ಳಿ ಸಿದ್ದೇಗೌಡಗೆ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದರು.
ಇನ್ನೂ ಕಳೆದ ನಾಲ್ಕು ದಿನಗಳಿಂದ ಮತದಾರರ ಕೈಗೆ ಸಿಗದೆ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ನಾಪತ್ತೆಯಾಗುವ ಮೂಲಕ ಜಿ.ಟಿ ದೇವೇಗೌಡರ ಗೆಲುವಿಗೆ ಪರೋಕ್ಷವಾಗಿ ಮಾವಿನಹಳ್ಳಿ ಸಿದ್ದೇಗೌಡ ಕಾರಣರಾಗಿದ್ದಾರೆ. ಹೀಗಾಗಿ ಮಾವಿನಹಳ್ಳಿ ಸಿದ್ದೇಗೌಡ ನಡೆಗೆ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದು, ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ನಮಗೆ ಬಹುಮತ ಬರುವುದು ಖಚಿತ. ಈಗಾಗಲೇ ಹಲವು ಚುನಾವಣೋತ್ತರ ಸರ್ವೆಗಳೂ ಸಹ ಅದನ್ನೇ ಹೇಳಿವೆ. ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿದೆ. ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರೋದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವರುಣಾ ಕ್ಷೇತ್ರದಲ್ಲಿ ನನ್ನ ಗೆಲುವು ಸುಲಭ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿಯಿದೆ. ಇಲ್ಲಿ ಬಿಜೆಪಿ ಎಲ್ಲೂ ಕೂಡ ನೇರವಾಗಿ ನಮ್ಮ ಜೊತೆ ಪೈಪೋಟಿ ಇಲ್ಲ. ವರುಣಾ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಸೋಮಣ್ಣ ಅವರ ಕೊಡುಗೆ ಏನು? ಯಾಕೆ ವರುಣಾದ ಜನತೆ ಅವರಿಗೆ ವೋಟ್ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಬಿಜೆಪಿಯವರು ಜಾತಿ ಕಾರ್ಡ್ ಪ್ಲೇ ಸೋಮಣ್ಣ ಕಣಕ್ಕಿಳಿಸಿದ್ದಾರೆ. ಅದು ಬಿಟ್ಟರೆ ದುಡ್ಡಿನ ರಾಜಕೀಯ ಮಾಡಿದ್ದಾರೆ. ಅವರು ಏನೇ ಮಾಡಿದರು ನಾನು ಸುಲಭವಾಗಿ ಗೆಲ್ಲುತ್ತೇನೆ, ಜೆಡಿಎಸ್ ಪಕ್ದವರು ಸಹ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದರು.
ಜನ ನಮ್ಮ ಪ್ರಣಾಳಿಕೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು. ಲಿಂಗಾಯತ ನಾಯಕರೆಲ್ಲಾ ಭ್ರಷ್ಟಾಚಾರಿಗಳು ಅಂತ ನಾನೆಲ್ಲಿ ಹೇಳಿದ್ದೆ? ನಾನು ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಿ ಅಂತ ಹೇಳಿದ್ದೆ. ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡಿದರು. ನಮ್ಮ ಪಕ್ಷ ಹಾಗೂ ನನ್ನ ವಿರುದ್ದ ವಿನಾಕಾರಣ ಬಿಜೆಪಿ ನಾಯಕರು ಆರೋಪವನ್ನ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications