Karnataka Elections 2023: ಯಾವು ಪಕ್ಷಗಳು ಏನನ್ನು ನೆಚ್ಚಿಕೊಂಡಿವೆ- ಇಲ್ಲಿದೆ ರೌಂಡಪ್ ವರದಿ
ಬೆಂಗಳೂರು, ಮೇ 08: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರವು ಇಂದು ಸಂಜೆ ಕೊನೆಗೊಳ್ಳುತ್ತಿದೆ. ಮೂರು ಪಕ್ಷಗಳು ತಮ್ಮ ಅದೃಷ್ಟವನ್ನು ಇನ್ನೆರಡು ದಿನಗಳಲ್ಲಿ ಪರೀಕ್ಷಿಸಿಕೊಳ್ಳಲಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಲವು ವಿಚಾರಗಳ ಮೇಲೆ ಈ ಚುನಾವಣೆಯನ್ನು ಎದುರಿಸುತ್ತಿವೆ. ಯಾವ ಪಕ್ಷ ಯಾವುದರ ಮೇಲೆ ಚುನಾವಣೆಯನ್ನು ಎದುರಿಸುತ್ತಿದೆ ಎಂಬುದನ್ನು ತಿಳಿಯಲು ಈ ವರದಿ ಓದಿ.
ಮೋದಿ ಜನಪ್ರಿಯತೆಯನ್ನು ನೆಚ್ಚಿಕೊಂಡಿರುವ ಬಿಜೆಪಿ
ಕೊನೆಯ ಹಂತದ ಪ್ರಚಾರದಲ್ಲಿ ಬಿಜೆಪಿಯು ರಾಷ್ಟ್ರೀಯ ನಾಯಕರನ್ನು ನೆಚ್ಚಿಕೊಂಡಿತು. ವಿಶೇಷವಾಗಿ ಪ್ರಧಾನಿ ಮೋದಿ ಅವರು ರಾಜ್ಯಾದ್ಯಂತ 20 ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿದರು. ಜೊತೆಗೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮೆಗಾ ರೋಡ್‌ಶೋ ಕೈಗೊಂಡರು. ಈ ರೋಡ್‌ಶೋ ಸುಮಾರು 25 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಮೋದಿ ಅವರು ಕಾಂಗ್ರೆಸ್‌ನ ಎರಡು ತಪ್ಪು ಹೆಜ್ಜೆಗಳನ್ನು ( ಬಿಜೆಪಿ ಆರೋಪ ) ಬಳಸಿಕೊಂಡರು. ತಮ್ಮ ಮೇಲಿನ ವೈಯಕ್ತಿಕ ದಾಳಿ ಮತ್ತು ಇನ್ನೊಂದು ಅದು ಭಜರಂಗದಳವನ್ನು ನಿಷೇಧಿಸಿವು ವಿಚಾರವನ್ನು ಅವರು ತಮ್ಮ ಭಾಷಣದುದ್ದಕ್ಕೂ ಹೇಳಿಕೊಂಡರು. ಪ್ರಚಾರದ ಕೊನೆಯ ದಿನಗಳಲ್ಲಿ, ಮೋದಿ ಅವರು ತಮ್ಮ ಭಾಷಣವನ್ನು 'ಬಜರಂಗ್ ಬಾಲಿ ಕಿ ಜೈ' ಎಂದು ಪ್ರಾರಂಭಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಕೂಡ ಮುಸ್ಲಿಮರಿಗೆ ಶೇ 4 ಮೀಸಲಾತಿಯನ್ನು ರದ್ದುಗೊಳಿಸುವ ವಿಷಯದ ಬಗ್ಗೆ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಇದಲ್ಲದೆ, ಕೇಸರಿ ಪಕ್ಷವು ಎಸ್‌ಸಿ, ಎಸ್‌ಟಿ, ಲಿಂಗಾಯತ, ಮತ್ತು ಒಕ್ಕಲಿಗರಿಗೆ ಹೆಚ್ಚುವರಿ ಮೀಸಲಾತಿಯನ್ನು ಒದಗಿಸಿದ ನಂತರ ಜಾತಿ ಲೆಕ್ಕಾಚಾರದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಮೋದಿ ಮತ್ತು ಶಾ ಬಿಜೆಪಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರೂ, ಅದು ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. 1985 ರಿಂದ ರಾಜ್ಯದಲ್ಲಿ ಯಾವುದೇ ಪಕ್ಷ ಸತತ ಜನಾದೇಶವನ್ನು ಗೆದ್ದಿಲ್ಲವೆಂಬುದು ಗಮನಿಸಬೇಕಿರುವ ಅಂಶವಾಗಿದೆ.
ಅಧಿಕಾರ ವಿರೋಧಿ ಅಲೆ, ಗ್ಯಾರಂಟಿಗಳ ಮೇಲೆ ಕಾಂಗ್ರೆಸ್ ಅವಲಂಬನೆ
ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆಯಲ್ಲಿ ಕಾಂಗ್ರೆಸ್ ಇದೆ. ಪಿಎಂ ಮೋದಿಯವರ ಕೊನೆಯ ಕ್ಷಣದ ಪ್ರಚಾರದ ಹೊರತಾಗಿಯೂ ಕಾಂಗ್ರೆಸ್ ಕಾರ್ಯಕರ್ತರು ಆತ್ಮವಿಶ್ವಾಸವನ್ನು ಹೊರಹಾಕುತ್ತಿದ್ದಾರೆ. ಐದು ಚುನಾವಣಾ ಪೂರ್ವ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ.
ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧ ಜನರ ಆಕ್ರೋಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ತನ್ನ ಪ್ರಚಾರದಲ್ಲಿ ಸ್ಥಳೀಯ ವಿಚಾರಗಳನ್ನೇ ಎತ್ತಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಪ್ರಮುಖ ಪ್ರಚಾರದ ವಿಚಾರಗಳನ್ನಾಗಿ ಪರಿವರ್ತಿಸುವಲ್ಲಿ ಕಾಂಗ್ರೆಸ್ ಯತ್ನಿಸಿದೆ. ಬಿಜೆಪಿಗೆ ಬಿಸಿ ಮುಟ್ಟಿಸಲು ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲಿ ಅಸಮಾಧಾನಗೊಂಡಿದ್ದ ಉತ್ತರ ಕರ್ನಾಟಕದ ಇಬ್ಬರು ಪ್ರಮುಖ ನಾಯಕರನ್ನು ಸೆಳೆಯಲು ಕಾಂಗ್ರೆಸ್ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಲಿಂಗಾಯತ ಮತಗಳ ಮೇಲೆ ಕಾಂಗ್ರೆಸ್ ಕೇಂದ್ರಿಕರಿಸಿದೆ.
ಮತ್ತೆ ಕಿಂಗ್‌ಮೇಕರ್ ಆಗುವತ್ತ ಜೆಡಿಎಸ್
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮೂರು ತಿಂಗಳು ಮುಂಚಿತವಾಗಿಯೇ ತಯಾರಿ ನಡೆಸಿದ್ದರು. ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಪಂಚರತ್ನ ಯಾತ್ರೆಯನ್ನು ಕೈಗೊಳ್ಳಲಾಯಿತು. ಆದರೆ, ಈ ಸಮಯದಲ್ಲಿ ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿರುವುದು ದೊಡ್ಡ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ಜೆಡಿಎಸ್ ಕೇಂದ್ರಿಕರಿಸಲು ಸಾಧ್ಯವಾಗಲಿಲ್ಲ.
ತಮ್ಮ ಪ್ರಚಾರದ ಉದ್ದಕ್ಕೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನವಾಗಿ ಅಂತರವನ್ನು ಕಾಯ್ದುಕೊಳ್ಳುವ ಕಾರ್ಯವನ್ನು ಜೆಡಿಎಸ್ ಮಾಡಿದೆ. ಅದರ ಪ್ರಚಾರ ಮತ್ತು ಪ್ರಣಾಳಿಕೆಯಲ್ಲಿ ರೈತರ ಕಲ್ಯಾಣ, ಬಡತನ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದಂತಹ ರಾಜ್ಯದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ. ಪಕ್ಷವು ಯೋಗ್ಯ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಕಿಂಗ್‌ಮೇಕರ್ ಆಗುವ ಭರವಸೆಯಲ್ಲಿದೆ.












Click it and Unblock the Notifications