BS Yediyurappa: ಶೆಟ್ಟರ್ ಸೋಲಿಸಲು ಪಣತೊಟ್ಟ ಬಿಜೆಪಿ: ಚುನಾವಣೆಗೂ ಮುನ್ನ ಜಗದೀಶ್ ಶೆಟ್ಟರ್ ಭವಿಷ್ಯ ಹೇಳಿದ ಯಡಿಯೂರಪ್ಪ
ಹುಬ್ಬಳ್ಳಿ, ಏಪ್ರಿಲ್26: ರಾಜ್ಯ ವಿಧಾನ ಚುನಾವಣಾ ಟಿಕೆಟ್ ಘೋಷಣೆಯಿಂದಾಗಿ ಬಿಜೆಪಿಯಲ್ಲಿ ಬಂಡಾಯ ಬೆಂಕಿ ಜೋರಾಗಿದೆ. ಈಗಾಗಲೇ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಸೋಲಿಸಲು ರಾಜ್ಯ ಬಿಜೆಪಿ ಪಣತೊಟ್ಟಿದ್ದು, ಚುನಾವಣೆಗೂ ಮುನ್ನ ಶೆಟ್ಟರ್ ಭವಿಷ್ಯವನ್ನ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವುದರಿಂದ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಇದೀಗ ಲಿಂಗಾಯತ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಂಟ್ರಿ ಕೊಟ್ಟಿದ್ದು, ಮಂಗಳವಾರ ರಾತ್ರಿ ಲಿಂಗಾಯತ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ.

ಈ ಕುರಿತು ಸಭೆಯ ಬಳಿಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ, ಜಗದೀಶ್ ಶೆಟ್ಟರ್ ಗೆ ಬಿಜೆಪಿ ಎಲ್ಲಾ ಸ್ಥಾನಮಾನವನ್ನ ನೀಡಿದ್ದು, ಬಿಜೆಪಿ ಗೆ ದ್ರೋಹ ಮಾಡಿ ಹೋಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಗೆಲ್ಲಲು ಬಿಡಬಾರದು. ಇದನ್ನು ಸವಾಲಾಗಿ ಸ್ವೀಕರಿಸಿ ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಜಗದೀಶ್ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗದೀಶ ಶೆಟ್ಟರ್ ಯಾವುದೇ ಕಾರಣಕ್ಕೂ ಗೆಲ್ಲಲು ಸಾಧ್ಯವಿಲ್ಲ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ..
— oneindiakannada (@OneindiaKannada) April 26, 2023
-ಬಿ.ಎಸ್. ಯಡಿಯೂರಪ್ಪ#bsyedurappa #jagadishshettar #karnatakaelections2023 #bjp #Congress pic.twitter.com/9umrj3c0kN
ಪಕ್ಷಕ್ಕೆ ಜಗದೀಶ್ ಶೆಟ್ಟರ್ ಅವರು ಪಕ್ಷದ್ರೋಹ ಮಾಡಿದ್ದಾರೆ. ಹೀಗಾಗಿ, ಲಿಂಗಾಯತ ಸಮಾಜದ ಬಾಂಧವರು ಇಂಥವರಿಗೆ ತಕ್ಕ ಪಾಠ ಕಲಿಸಬೇಕು. ಶೆಟ್ಟರ್ ಒಬ್ಬ ವಿಶ್ವಾಸಘಾತುಕ. ಬಿಜೆಪಿಯಲ್ಲಿ ಎಲ್ಲ ಸ್ಥಾನಮಾನ ಪಡೆದ ಶೆಟ್ಟರ್ ಪಕ್ಷಕ್ಕೆ ನಿಷ್ಠನಾಗಿ ಉಳಿಯಲಿಲ್ಲ, ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ ಎಲ್ಲ ಹಂತದ ಸ್ಥಾನಮಾನ ಅನುಭವಿಸಿದ್ದರು. ಆದರೆ, ಇದಕ್ಕೆ ಋುಣಿಯಾಗಿರಲಿಲ್ಲ ಎಂದು ಕಿಡಿಕಾರಿದರು.

ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಇಂತಹ ಪಕ್ಷದ್ರೋಹಿಗಳನ್ನು ಸಮಾಜ ಬಾಂಧವರೆಲ್ಲರೂ ಒಟ್ಟಾಗಿ ಸೋಲಿಸಬೇಕಿದೆ. ಲಿಂಗಾಯತ ಸಮುದಾಯವೇ ಒಟ್ಟಾಗಿ ಶೆಟ್ಟರ್‌ನ್ನು ಸೋಲಿಸುವ ಮೂಲಕ ನಮ್ಮ ಸಮಾಜದ ಶಕ್ತಿ ಪ್ರದರ್ಶನ ನಡೆಸಬೇಕು. ನಿಮ್ಮ ಬದಲು ನಿಮ್ಮ ಪತ್ನಿಗೆ ಟಿಕೆಟ್ ನೀಡುತ್ತೇವೆ. ನೀವು ಕೇಂದ್ರಕ್ಕೆ ಬನ್ನಿ ಎಂದು ಮೋದಿಯವರೇ ಅಮಿತ್ ಶಾ ಮೂಲಕ ಮನವಿ ಮಾಡಿದ್ದರು. ಆದರೆ, ಶೆಟ್ಟರ್ ಕೇವಲ ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಇಂಥವರನ್ನು ಸಮಾಜ ಬಾಂಧವರು ಎಂದಿಗೂ ಕ್ಷಮಿಸಲೂ ಬಾರದು ಎಂದು ಅಕ್ರೋಶ ಹೊರಹಾಕಿದರು.
ಇನ್ನೂ ಬಿಜೆಪಿ ಹಲವು ಸ್ಥಾನಗಳನ್ನ ಜಗದೀಶ್ ಶೆಟ್ಟರ್ ಗೆ ನೀಡಿದೆ. ಅವರ ಹೆಸರು ಹೇಳಲೂ ನನಗೆ ಇಷ್ಟವಿಲ್ಲ ಎಂದು ಏಕವಚನದಲ್ಲೇ ಸಂಬೋಧಿಸಿದ ಯಡಿಯೂರಪ್ಪ ಅವರು, ಈ ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಹೇಶ ಟೆಂಗಿನಕಾಯಿ ಕಣಕ್ಕಿಳಿದಿದ್ದಾರೆ. ಇವರೂ ಲಿಂಗಾಯತರೇ. ಇವರನ್ನು ಅಧಿಕ ಮತಗಳಿಂದ ಆರಿಸಿ ತರುವ ಮೂಲಕ ಜಗದೀಶ್ ಶೆಟ್ಟರ್‌ಗೆ ಪಾಠ ಕಲಿಸಿ ಎಂದು ಕ್ಷೇತ್ರದ ಜನತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.
ಇನ್ನೂ ವೀರಶೈವ-ಲಿಂಗಾಯತ ಸಮಾಜ ಬಾಂಧವರು ಈ ಸತ್ಯಾಂಶವನ್ನು ಅರಿತುಕೊಂಡು ಬರುವ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್‌ಗೆ ದಯನೀಯ ಸ್ಥಿತಿಯಲ್ಲಿ ಸೋಲನ್ನು ತೋರಿಸಬೇಕು. ಅಂದಾಗ ನನಗೆ ತೃಪ್ತಿ ಎಂದು ಯಡಿಯೂರಪ್ಪ ಅವರು ಕಿಡಿ ಕಾರಿದರು.












Click it and Unblock the Notifications