Karnataka Assembly Elections: ಸಿಎಂ ಬಸವರಾಜ ಬೊಮ್ಮಾಯಿ ಪರ ಅಖಾಡಕ್ಕಿಳಿದ ಕಿಚ್ಚ ಸುದೀಪ್ ಹೇಳಿದ್ದೇನು?
ಕರ್ನಾಟಕದಲ್ಲಿ ಬಿರು ಬೇಸಿಗೆಯ ಜೊತೆ 2023ರ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ಪಕ್ಷಗಳ ಹಲವು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ.
ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಬುಧವಾರ, ಏಪ್ರಿಲ್ 19) ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಚಿತ್ರನಟ ಕಿಚ್ಚ ಸುದೀಪ್ ಸೇರಿದಂತೆ ಹಲವು ನಾಯಕರು, ಸಾವಿರಾರು ಕಾರ್ಯಕರ್ತರು ಸಾಥ್ ನೀಡಲಿದ್ದಾರೆ.

ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಕಿಚ್ಚ ಸುದೀಪ್, "ಶಿಗ್ಗಾಂವಿ ಕ್ಷೇತ್ರದಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ. ಈ ಹಿಂದೆಯೂ ಕೆಲವು ಸ್ನೇಹಿತರ ಪರ ಪ್ರಚಾರ ಮಾಡಿದ್ದೆ, ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ ಕಡೆ ಪ್ರಚಾರ ಮಾಡುತ್ತೇನೆ," ಎಂದು ಹೇಳಿದರು.
"ಪ್ರತಿ ಬಾರಿಯೂ ಬೇರೆ ಕಡೆಗಳಿಂದ ಪ್ರಚಾರಕ್ಕೆ ಬರುವಂತೆ ನನಗೆ ಆಹ್ವಾನ ಬರುತ್ತದೆ. ಆದರೆ ಈ ಸಾರಿ ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಇದಕ್ಕೆ ಈಗಾಗಲೇ ಕಾರಣವನ್ನೂ ತಿಳಿಸಿದ್ದೇನೆ," ಎಂದರು.
"ಚುನಾವಣಾ ಪ್ರಚಾರ ನನಗೆ ಹೊಸದೇನಲ್ಲ. ಮುಖ್ಯಮಂತ್ರಿ ಪರ ಶಿಗ್ಗಾಂವಿಯಿಂದ ನನ್ನ ಪ್ರಚಾರ ಆರಂಭಿಸುತ್ತೇನೆ. ಇದರಲ್ಲಿ ಪಾದಯಾತ್ರೆ, ರೋಡ್ ಶೋ ಎಲ್ಲವೂ ಇರುತ್ತದೆ. ಮೇ 7ರ ವರೆಗೆ ಪ್ರಚಾರ ಮಾಡುತ್ತೇನೆ. ಯಾರ ಪರವಾಗಿ, ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕು ಎಂಬುದನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಲಿನಕ್ಷೆ ತಯಾರಿ ಮಾಡಿಕೊಡುತ್ತಾರೆ," ಕಿಚ್ಚ ಸುದೀಪ್ ತಿಳಿಸಿದರು.

ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನಾನು ಬುಧವಾರ (ಏಪ್ರಿಲ್ 19)ರಂದು ಶಿಗ್ಗಾಂವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಲವು ಸಚಿವರು, ನಟ ಸುದೀಪ್ ಭಾಗಿಯಾಗಲಿದ್ದಾರೆ," ಎಂದು ತಿಳಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದರೆ, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications