ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸಲು ಜಗದೀಶ್ ಶೆಟ್ಟರ್‌ಗೆ ಕಾಂಗ್ರೆಸ್ ಸುಪಾರಿ- ಲಿಂಗಾಯತ ಬೆಲ್ಟ್‌ನಲ್ಲಿ 'ಕೈ'ಗೆ ಸಿಕ್ಕ ಹೊಸ ಆಯುಧ
ಹುಬ್ಬಳ್ಳಿ, ಆಗಸ್ಟ್ 31: ಧಾರವಾಡ ಭಾಗದ ಲಿಂಗಾಯತ ಮುಖಂಡ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹಣಿಯುವುದು ಲಿಂಗಾಯತ ನಾಯಕರ ಕಾರ್ಯತಂತ್ರವಾಗಿದೆ. ಬಿಜೆಪಿಯೊಳಗೆ ಬಂಡಾಯವನ್ನು ಸೃಷ್ಟಿಸಲು ಕಾಂಗ್ರೆಸ್ ನಾಯಕರು ಜಗದೀಶ್ ಶೆಟ್ಟರ್ ಅವರಿಗೆ ಸುಪಾರಿ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಿನಿಂದ ಶೆಟ್ಟರ್ ಅವರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಅದರಲ್ಲೂ ಪ್ರಹ್ಲಾದ್ ಜೋಶಿ ಹಾಗೂ ಬಿಎಲ್ ಸಂತೋಷ್ ಅವರ ವಿರುದ್ಧ ಗುಪ್ತ ಹಗೆಯನ್ನು ಹೊಂದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಇದರಿಂದ ಕೆರಳಿದ ಶೆಟ್ಟರ್ ಕಾಂಗ್ರೆಸ್ ಸೇರಿ ಎಂಎಲ್‌ಸಿ ಆಗಿದ್ದಾರೆ.

ಶೆಟ್ಟರ್ ಶಿಷ್ಯ ಮನೇನಕೊಪ್ಪ
ಶಂಕರ ಪಾಟೀಲ ಮನೇನಕೊಪ್ಪ ಅವರು ಶೆಟ್ಟರ್ ಅವರ ಶಿಷ್ಯರೆಂದೇ ಗುರುತಿಸಲ್ಪಟ್ಟಿದ್ದಾರೆ. ಈಗ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ. ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಲಿಂಗಾಯತ ಮುಖಂಡರ ನಿರ್ಲಕ್ಷ್ಯದ ಬಗ್ಗೆ ಮುನೇನಕೊಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೆಟ್ಟರ್ ಅವರು ಪಕ್ಷ ತೊರೆದಿರುವುದನ್ನು ಪದೇ ಪದೇ ಉಲ್ಲೇಖಿಸಿ ಮಾತನಾಡಿದ ಅವರು, 'ಸಿ ಎಂ ನಿಂಬಣ್ಣನವರ್ ಮತ್ತು ಎಸ್ ಐ ಚಿಕ್ಕನಗೌಡರಿಗೆ ಬಿಜೆಪಿ ಅವಕಾಶವನ್ನು ನಿರಾಕರಿಸಿತು. ಆದರೆ, ಧಾರವಾಡ ಜಿಲ್ಲೆಯಲ್ಲಿ ಪಕ್ಷದಿಂದ ಆಯ್ಕೆಯಾದ ಮೂವರೂ ಶಾಸಕರು ಲಿಂಗಾಯತರೇ ಆಗಿದ್ದಾರೆ' ಎಂದು ಮನೇನಕೊಪ್ಪ ಹೇಳಿದ್ದಾರೆ.
ನವಲಗುಂದ ಮಾಜಿ ಶಾಸಕರಾಗಿರುವ ಮನೇನಕಪ್ಪ ಶೆಟ್ಟರ್ ಅವರ ಪರಮಾಪ್ತರು. 2008ರಲ್ಲಿ ಬಿಎಸ್ ಯಡಿಯೂರಪ್ಪ ಬೆಂಬಲವಿದ್ದರೂ ಆರ್ ಬಿ ಶಿರಿಯಣ್ಣನವರ್ ಬದಲಿಗೆ ಮುನೇನಕೊಪ್ಪ ಅವರಿಗೆ ಟಿಕೆಟ್ ನೀಡಬೇಕೆಂದು ಶೆಟ್ಟರ್ ಒತ್ತಾಯಿಸಿದ್ದರು.

2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಶಿರಿಯಣ್ಣನವರ್ ವಿರುದ್ಧ ಮುನೇನಕೊಪ್ಪ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಯಡಿಯೂರಪ್ಪನವರ ಪಕ್ಷವು ಬಿಜೆಪಿಯೊಂದಿಗೆ ವಿಲೀನಗೊಂಡಾಗ, ಮನೇನಕೊಪ್ಪ ನವಲಗುಂದದಿಂದ 2018 ರಲ್ಲಿ ಮತ್ತೊಮ್ಮೆ ಆಯ್ಕೆಯಾದರು.
ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಲು ಶೆಟ್ಟರ್ ನಿರಾಕರಿಸಿದರು. ಆದರೆ, ಧಾರವಾಡ ಜಿಲ್ಲೆಯಿಂದ ಅರವಿಂದ ಬೆಲ್ಲದ್ ಅವರನ್ನು ಸಚಿವರನ್ನಾಗಿ ಮಾಡಲು ಪಕ್ಷವು ಒಲವು ತೋರಿತು. ಶೆಟ್ಟರ್ ಅವರು ಮುನೇನಕೊಪ್ಪ ಅವರಿಗೆ ಸಂಪುಟ ಸ್ಥಾನ ಸಿಗುವಂತೆ ನೋಡಿಕೊಂಡರು. ಬೆಲ್ಲದ್ ಅವರನ್ನು ಜೋಶಿ ಬೆಂಬಲಿಸಿದ್ದರು. ಇದು ಮಾಜಿ ಮುಖ್ಯಮಂತ್ರಿ ಶೆಟ್ಟರ್ ಮತ್ತು ಕೇಂದ್ರ ಸಚಿವ ಜೋಶಿ ನಡುವಿನ ಸಂಬಂಧವನ್ನು ಹದಗೆಡಿಸಿತು.
ಶೆಟ್ಟರ್ ಅವರನ್ನು ಬಳಸಿಕೊಳ್ಳುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಶೆಟ್ಟರ್ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡರು. ಅವರು ಕೆಳ ಹಂತದಲ್ಲಿ ಯಾವುದೇ ಪ್ರಭಾವವನ್ನು ಹೊಂದಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ, ಮನೇನಕೊಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಂಡರೂ, ಜೋಶಿ ವಿರುದ್ಧ ನಿಂತು ಗೆಲ್ಲುವಷ್ಟು ಪ್ರಭಾವ ಹೊಂದಿಲ್ಲ. ಅವರನ್ನು ಸೇರಿಸಿಕೊಳ್ಳುವುದರಿಂದ ಕಾಂಗ್ರೆಸ್‌ಗೆ ಏನು ಲಾಭ ಎಂಬ ಪ್ರಶ್ನೆಗಳೂ ಮೂಡಿವೆ.

ಆದರೆ, ಮನೇನಕೊಪ್ಪ ಮೂಲಕ ಬಿಜೆಪಿಗೆ ಸಂದೇಶವೊಂದನ್ನು ರವಾನಿಸಲು ಲಿಂಗಾಯತ ನಾಯಕರು ತಯಾರಾಗಿದ್ದಾರೆ ಎಂದು ತಿಳಿದುಬಂದಿದೆ. ಲಿಂಗಾಯತ-ಪಂಚಮಸಾಲಿಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂಬುದು ಸಂದೇಶದ ತಿರುಳಾಗಿದೆ. ಈ ಹಿನ್ನೆಲೆಯಲ್ಲಿ ಶೆಟ್ಟರ್ ಮೂಲಕ ಮನೇನಕೊಪ್ಪ ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎನ್ನಲಾಗುತ್ತಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಬಹುತೇಕ ಮತದಾರರು ಲಿಂಗಾಯತ-ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಲಿಂಗಾಯತ ನಾಯಕರಾದ ಶೆಟ್ಟರ್ ಅವರನ್ನು ಬಳಸಿಕೊಂಡು ಜೋಶಿ ಹಣಿಯಲು ಕಾಂಗ್ರೆಸ್ ತಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications