Karnataka rain: ರಾಜ್ಯದ ಒಳನಾಡಿನ ಈ ಜಿಲ್ಲೆಗಳಲ್ಲಿ 5ದಿನ ಮಳೆ: ಹವಾಮಾನ ವರದಿ
ಬೆಂಗಳೂರು, ಮಾರ್ಚ್ 20: ಬೇಸಿಗೆಯ ತಾಪಮಾನದ ಕಾವು ಹೆಚ್ಚಿರುವ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ 05 ದಿನಗಳ ಕಾಲ ಅಲ್ಲಲ್ಲಿ ಜೋರು ಮಳೆ ಬರಲಿದೆ ಎಂದು ತಿಳಿಸಲಾಗಿದೆ.
ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಕೆಲವೆಡೆ ವ್ಯಾಪಕ ಮಳೆ ಆಗಬಹುದಾದ ಸಂಭವವಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಇತ್ತೀಚೆಗೆ ತಂಪು ವಾತಾವರಣದ ರೀತಿ ಭಾಸವಾಗುತ್ತಿದೆ. ಮಧ್ಯಾಹ್ನ ಎಂದಿನಂತೆ ವಿಪರೀತ ಬಿಸಿಲು ದಾಖಲಾಗುತ್ತಿದೆ.

ಈ ನಡುವೆ ಮಳೆ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ವಿಜಯಪುರದಲ್ಲಿ ಮುಂದಿನ ಐದು ದಿನಗಳ ಪೈಕಿ ಮೊದಲ ಮೂರು ಹೆಚ್ಚು ಮಳೆ ಬರುವ ಲಕ್ಷಣಗಳು ಇವೆ. ನಂತರದ ಎರಡು ದಿನ ಒಂದೆರಡ ಕಡೆಗಳಲ್ಲಿ ಸಾಮಾನ್ಯ ಮಳೆ ಬೀಳಲಿದೆ.
ಕರಾವಳಿ, ಒಳನಾಡಿನಲ್ಲೂ ಮಳೆ ಸಂಭವ
ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಮೂರು ದಿನ ಮಳೆ ಆರ್ಭಟಿಸಲಿದೆ. ಶನಿವಾರ ಒಂದು ದಿನ ಉತ್ತರ ಕನ್ನಡದಲ್ಲಿ ವರುಣನ ದರ್ಶನವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ, ನಾಳೆ ಶುಕ್ರವಾರ ಅಷ್ಟಾಗಿ ಮಳೆ ನಿರೀಕ್ಷೆ ಇಲ್ಲ. ಶನಿವಾರ (ಮಾರ್ಚ್ 22)ದಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳ ಹಲವೆಡೆ ಮಳೆ ಆರ್ಭಟಿಸುವ ಸಾಧ್ಯತೆಗಳು ದಟ್ಟವಾಗಿದೆ.

ಗರಿಷ್ಠ ತಾಪಮಾನ ಜಿಲ್ಲೆಯಲ್ಲೂ ಮಳೆ
ನಂತರದ ಮೂರು ದಿನ ದಕ್ಷಿಣ ಒಳನಾಡಿನಲ್ಲಿ ಅಷ್ಟಾಗಿ ಮಳೆ ಬಾರದು ಎಂದು ತಿಳಿದು ಬಂದಿದೆ. ಇನ್ನೂ ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 39.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 18.4 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಹೆಚ್ಚು ತಾಪಮಾನ ದಾಖಲಾಗುವ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿಯೂ ದಿನ ಬಿಟ್ಟು ದಿನ ಹಗುರ ಮಳೆ ಆಗಲಿದೆ. ಇದಲ್ಲದೇ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಭಾರೀ ಮಳೆ ಮುನ್ಸೂಚನೆ ಇಲ್ಲ. ವಾತಾವರಣದಲ್ಲಿ ಗಂಭೀರ ಸ್ವರೂಪ ವಿದ್ಯಮಾನಗಳು ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿಗೆ 1ದಿನ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲು ಹೀಗೆ ಮುಂದುವರಿಯಲಿದೆ. ಆದರೆ ಮಾರ್ಚ್ 22ರಂದು ಮಾತ್ರ ಒಂದು ನಗರದ ವಿವಿಧೆಡೆ ಸಾಮಾನ್ಯವಾಗಿ ಮಳೆ ಆಗಲಿದೆ. ಉಳಿದಂತೆ ಯಥಾ ಸ್ಥಿತಿಯಲ್ಲಿಯೇ ಬಿಸಿಲಿನ ಶಾಖ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.












Click it and Unblock the Notifications