ಕರ್ನಾಟಕ; ವಾಡಿಕೆಯಂತೆ ಸುರಿಯಲಿದೆ ಮುಂಗಾರು ಮಳೆ
ಬೆಂಗಳೂರು, ಮೇ 16; ಈ ವರ್ಷ ಬಿರು ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಹವಾಮಾನ ಇಲಾಖೆ ನೆಮ್ಮದಿ ತರುವ ಸುದ್ದಿ ನೀಡಿದೆ. ಜೂನ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಲಿದ್ದು, ವಾಡಿಕೆಯಂತೆ ಮಳೆಯಾಗಲಿದೆ. ಮುಂಗಾರು ಅವಧಿಯಲ್ಲಿ ಸುರಿಯುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೂ ಸಹಕಾರಿಯಾಗಲಿದೆ.
ಜೂನ್‌ನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಮುಂಗಾರು ಮಾರುತಗಳಿಂದ ಮಳೆಯಾಗಲಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಈ ಮುಂಗಾರು ಮಳೆಯೇ ಆಧಾರವಾಗಿದೆ. ನಿಗದಿಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ರಾಜ್ಯವನ್ನು ಪ್ರವೇಶ ಮಾಡಲಿದೆ. ಬಳಿಕ ಇತರ ರಾಜ್ಯಗಳಲ್ಲಿ ಮಳೆ ಆರಂಭವಾಗಲಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ಮೋಖಾ' ಚಂಡಮಾರುತದ ಪ್ರಭಾವದಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಕರ್ನಾಟಕದಲ್ಲಿಯೂ ಕೆಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಈ ಚಂಡಮಾರುತ ಮುಂಗಾರು ಆರಂಭಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿದೆ.
ರಾಜ್ಯದಲ್ಲಿಯೂ ವಾಡಿಕೆಯಂತೆ ಮಳೆ; ಮೇ ತಿಂಗಳು ಅರ್ಧ ಕಳೆದಿದ್ದು ರೈತರು ಆಗಸದತ್ತ ಮುಖ ಮಾಡಿದ್ದಾರೆ. ತಿಂಗಳ ಅಂತ್ಯಕ್ಕೆ ಅವರು ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿಯೇ ಭಾರತೀಯ ಹವಾಮಾನ ಇಲಾಖೆ ಈ ಬಾರಿಯ ಮುಂಗಾರು ಋತುವಿನಲ್ಲಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹೇಳಿದೆ.

ಕಳೆದ ಎರಡು ವರ್ಷಗಳಿಂದ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಾಗುತ್ತಿದೆ. ಅಣೆಕಟ್ಟುಗಳು ತುಂಬಿದ್ದು, ಮಳೆ ಅಪಾರ ಹಾನಿಯನ್ನು ಉಂಟು ಮಾಡಿದೆ. ಅದರಲ್ಲೂ 2022ರಲ್ಲಿ ಮುಂಗಾರು ಋತು ಅವಧಿ ಮುಗಿದ ಬಳಿಕವೂ ಮಳೆಯಾಗುತ್ತಲೇ ಇತ್ತು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಈ ವರ್ಷದ ಬೇಸಿಗೆ ಸಹ ಜನರಿಗೆ ಸಂಕಷ್ಟ ತಂದಿದೆ. ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗಿ ಜನರು ಮಳೆ ಸುರಿದರೆ ಸಾಕು ಎಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಾಯುಭಾರ ಕುಸಿತದ ಪರಿಣಾಮ ಮೇ ತಿಂಗಳ ಮೊದಲ ವಾರದಲ್ಲಿ ಗುಡುಗು ಸಹಿತ ಮಳೆಯಾಗಿತ್ತು.
ಹುಬ್ಬಳ್ಳಿ, ಬೀದರ್, ಗದಗ ಸೇರಿದಂತೆ ಉತ್ತ ಕರ್ನಾಟಕದ ಭಾಗದ ಕೆಲವು ಜಿಲ್ಲೆಗಳಲ್ಲಿಯೂ ಮೇ ತಿಂಗಳಿನಲ್ಲಿ ಮಳೆಯಾಗಿದೆ. ಆದರೆ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮತ್ತೆ ಬಿಸಿಲಿನ ಝಳ ಹೆಚ್ಚಿದೆ. ಸುಡು ಬಿಸಿಲಿಗೆ ಜನರು ಹೈರಣಾಗಿದ್ದಾರೆ. ನದಿ, ಹಳ್ಳಗಳಲ್ಲಿ ನೀರಿನ ಹರಿವು ನಿಂತಿದ್ದು, ಜನರು ಬೇಗ ಮಳೆಯಾಗಲಿ ಎಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾರಗಳ ಹಿಂದೆ ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ 'ಮೋಖಾ' ಚಂಡಮಾರುತ ರೂಪಗೊಂಡಿದೆ. ಇದು ಉತ್ತರ ದಿಕ್ಕಿನ ಕಡೆ ಚಲಿಸಿ ಕ್ಷೀಣವಾಗಿದೆ. ಆದರೆ ಈ ಚಂಡಮಾರುತ ಮುಂಗಾರು ಋತು ಆರಂಭಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್ ಮೊದಲ ವಾರದಲ್ಲಿ ಕೇರಳಕ್ಕೆ ಈ ಬಾರಿಯ ಮುಂಗಾರು ಆಗಮಿಸಲಿದೆ.
ಬಳಿಕ ಮೂರರಿಂದ ನಾಲ್ಕು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮಿಸಲಿದೆ. ಈ ಬಾರಿ ವಾಡಿಕೆಯಂತೆ ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವಷ್ಟು ಮಳೆ ನಿರೀಕ್ಷೆ ಮಾಡುವಂತಿಲ್ಲ. ಕರ್ನಾಟಕದಲ್ಲಿ ವರ್ಷದಲ್ಲಿ ಸುರಿಯುವ ಮಳೆ ಪೈಕಿ ಮುಂಗಾರು ಅವಧಿಯಲ್ಲಿಯೇ ಹೆಚ್ಚು ಮಳೆಯಾಗುತ್ತದೆ. ಉಳಿದಂತೆ ಹಿಂಗಾರು, ಚಂಡಮಾರುತದಿಂದ ಆಗಾಗ ಮಳೆಯಾಗುತ್ತದೆ.
ಪ್ರತಿವರ್ಷವೂ ನೈಋತ್ಯ ಮುಂಗಾರು ಮಳೆಗೆ ಎಲ್ ನಿನೋ ಅಡ್ಡಿಪಡಿಸುತ್ತದೆ. ಏಪ್ರಿಲ್ ತಿಂಗಳ ಹವಾಮಾನ ಬದಲಾವಣೆ ನೋಡಿಕೊಂಡು ಭಾರತೀಯ ಹವಾಮಾನ ಇಲಾಖೆ ಈ ಬಾರಿ ಮುಂಗಾರು ಅವಧಿಯಲ್ಲಿ ಎಲ್ ನಿನೋ ತಟಸ್ಥವಾಗಿ ಇರಲಿದೆ. ಆದ್ದರಿಂದ ವಾಡಿಕೆಯಷ್ಟು ಮುಂಗಾರು ಮಳೆ ಸುರಿಯಲಿದೆ ಎಂದು ಅಂದಾಜಿಸಿದೆ.












Click it and Unblock the Notifications