ಜಿಲ್ಲಾ ಮುಖ್ಯ ರಸ್ತೆ ಪಕ್ಕ ಕಟ್ಟಡಗಳು ಎಷ್ಟು ದೂರ ಇರಬೇಕು?, ಪರಿಷ್ಕೃತ ಆದೇಶ
ಬೆಂಗಳೂರು, ಮಾರ್ಚ್ 06: ಜಿಲ್ಲಾ ಮುಖ್ಯ ರಸ್ತೆ ಅಕ್ಕ ಪಕ್ಕದಲ್ಲಿ ಕಟ್ಟಡಗಳು ಎಷ್ಟು ದೂರದಲ್ಲಿರಬೇಕು?. ಈ ಕುರಿತು ಕರ್ನಾಟಕದ ಲೋಕೋಪಯೋಗಿ ಇಲಾಖೆ ಪರಿಷ್ಕೃತ ಆದೇಶವನ್ನು ಜಾರಿಗೊಳಿಸಿದೆ. ರಸ್ತೆಯ ಸಮೀಪ ಕಟ್ಟಡ ನಿರ್ಮಾಣ ಮಾಡಿ ರಸ್ತೆ ಅಗಲೀಕರಣದ ಸಮಯದಲ್ಲಿ ಅದನ್ನು ಕೆಡವಿ ಹಾಕುವುದನ್ನು ತಪ್ಪಿಸಲು ಕಟ್ಟಡ ಎಷ್ಟು ದೂರದಲ್ಲಿರಬೇಕು ಎಂದು ಆದೇಶದ ಮೂಲಕ ಮಾಹಿತಿ ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವಿಜಯಕುಮಾರಿ ಕೆ. ಸಿ. ಸರ್ಕಾರದ ಉಪ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ (ಸಂಪರ್ಕ ಮತ್ತು ಕಟ್ಟಡ) ಆದೇಶವನ್ನು ಹೊರಡಿಸಿದ್ದಾರೆ.

ಆದೇಶ ರಾಜ್ಯ ಹೆದ್ದಾರಿಗಳು ಹಾದು ಹೋಗುವ ನಗರ/ ಪಟ್ಟಣ/ ಗ್ರಾಮಗಳ ಪರಿಮಿತಿ ಹಾಗೂ ಇತರೆ ಆಕ್ಷೇಪಿತ ಪ್ರದೇಶಗಳಿಗೆ ಅನ್ವಯಿಸುವಂತೆ ನಿಗದಿಪಡಿಸಿದ್ದ ಕಟ್ಟಡ ರೇಖೆಯನ್ನು ಜಿಲ್ಲಾ ಮುಖ್ಯ ರಸ್ತೆಗಳಿಗೂ ಅನ್ವಯಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ದಿನಾಂಕ 18.10.2004 ಸೇರಿ ಹಲವು ಆದೇಶ ಉಲ್ಲೇಖಿಸಲಾಗಿದೆ.
ಪ್ರಸ್ತಾವನೆ ಏನಾಗಿತ್ತು?; ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳಲ್ಲಿ ಬರುವ ಸಿಟಿ ಕಾರ್ಪೊರೇಷನ್, ಸಿಟಿ ಮುನಿಸಿಪಲ್ ಕೌನ್ಸಿಲ್, ಟೌನ್ ಮುನಿಸಿಪಲ್ ಕೌನ್ಸಿಲ್, ಟೌನ್ ಪಂಚಾಯತ್ ಮತ್ತು ಗ್ರಾಮ ಪಂಚಾಯತಿ ಪರಿಮಿತಿಗಳಲ್ಲಿ ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿಯ ಅಂಚಿನಿಂದ ಕಟ್ಟಡಗಳ ರೇಖೆಯ ಅಂತರವನ್ನು ಆದೇಶದಲ್ಲಿ ನಿಗದಿಗೊಳಿಸಲಾಗಿತ್ತು.
ಸದರಿ ಆದೇಶವು ಇದುವರೆವಿಗೂ ಚಾಲ್ತಿಯಲ್ಲಿರುತ್ತದೆ ಹಾಗೂ ಸದರಿ ಆದೇಶದಲ್ಲಿ ತಿಳಿಸಿರುವಂತೆ ಕಟ್ಟಡ ರೇಖೆಗಳನ್ನು ಗುರುತಿಸುವ ಬಗ್ಗೆ ಹೆಚ್ಚುವರಿ ಸ್ಪಷ್ಟನೆಯನ್ನು ನೀಡಲಾಗಿರುತ್ತದೆ. ದಿನಾಂಕ 18.10.2004ರ ಆದೇಶವು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳಿಗೆ ಮಾತ್ರ ಅನ್ವಯಿಸುತ್ತಿದ್ದು ಸದರಿ ಇಲಾಖೆ ವ್ಯಾಪ್ತಿಯಲ್ಲಿರುವ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಬರುವ ಸಿಟಿ ಕಾರ್ಪೊರೇಷನ್, ಸಿಟಿ ಮುನಿಸಿಪಲ್ ಕೌನ್ಸಿಲ್, ಟೌನ್ ಮುನಿಸಿಪಲ್ ಕೌನ್ಸಿಲ್, ಟೌನ್ ಪಂಚಾಯತ್ ಮತ್ತು ಗ್ರಾಮ ಪಂಚಾಯತಿ ಪರಿಮಿತಿಗಳಲ್ಲಿ ಜಿಲ್ಲಾ ಮುಖ್ಯ ರಸ್ತೆಗಳ ದಾಖಲಿತ ರಸ್ತೆ ಭೂಗಡಿಯ ಅಂಚಿನಿಂದ ಕಟ್ಟಡ ರೇಖೆಯನ್ನು ಯಾವ ಅಂತರದಲ್ಲಿ ನಿಗದಿಗೊಳಿಸಬೇಕೆಂಬ ಬಗ್ಗೆ ಇಲಾಖೆಯಲ್ಲಿ ಯಾವುದೇ ಮಾನದಂಡಗಳು ಇಲ್ಲದಿರುವುದನ್ನು ಹಾಗೂ ಸದರಿ ಆದೇಶದಲ್ಲಿ ಗ್ರಾಮ ಪಂಚಾಯತಿ ಪರಿಮಿತಿ ಎಂದು ತಿಳಿಸಿದ್ದು ಅದನ್ನು ನಿಖರವಾಗಿ ತಿಳಿಸುವ ಅಗತ್ಯತೆ ಇದೆಯೆಂದು ಜನಪ್ರತಿನಿಧಿಗಳು ಹಾಗೂ ಹಲವಾರು ಇಲಾಖೆಗಳು ಪ್ರಸ್ತಾಪಿಸುತ್ತಿರುತ್ತಾರೆ.
ಈ ಬಗ್ಗೆ ಮುಖ್ಯ ಇಂಜಿನಿಯರ್‌ಗಳ ಬೋರ್ಡ್ ಸಭೆಯಲ್ಲಿ ಚರ್ಚಿಸಿ ಸೂಕ್ತ ಶಿಫಾರಸ್ಸು ನೀಡುವಂತೆ ಕೋರಲಾಗಿತ್ತು. ದಿನಾಂಕ 18.10.2004ರ ಆದೇಶವನ್ನು ಜಿಲ್ಲಾ ಮುಖ್ಯ ರಸ್ತೆಗಳಿಗೂ ಹಾಗೂ ಆದೇಶದಲ್ಲಿರುವ ಗ್ರಾಮ ಪಂಚಾಯತಿ ಪರಿಮಿತಿ ಎಂಬುದನ್ನು ಪ್ರತಿ ಗ್ರಾಮ ಠಾಣಾದಲ್ಲಿ ಎಂದು ಅನ್ವಯ ಮಾಡಲು ಶಿಫಾರಸ್ಸು ಮಾಡಿರುತ್ತಾರೆ.
ಅದರಂತೆ PWD 23 RDF 2004 ದಿನಾಂಕ 18.10.2004ರಂದು ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ಆದೇಶಿಸುವುದು ಸೂಕ್ತವೆಂದು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ದಿನಾಂಕ 18.10.2004ರಲ್ಲಿ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ದಾಖಲಿತ ರಸ್ತೆಯ ಭೂಗಡಿಯ ಅಂಚಿನಿಂದ ನಿಗದಿಗೊಳಿಸಲಾಗಿದ್ದ ಕಟ್ಟಡ ರೇಖೆಯು ರಾಜ್ಯ ಹೆದ್ದಾರಿಯ ಜೊತೆಗೆ ಜಿಲ್ಲಾ ಮುಖ್ಯ ರಸ್ತೆಗಳಿಗೂ ಈ ಕೆಳಕಂಡಂತೆ ಅನ್ವಯಿಸುತ್ತದೆ.
ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಟೌನ್ ಪಂಚಾಯತಿ, ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮಠಾಣಾ ಪರಿಮಿತಿಯಲ್ಲಿ 6 ಮೀಟರ್. ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ 15 ಕಿ. ಮೀ. ದೂರದವರೆಗೆ 12 ಮೀಟರ್.
ಈ ಪರಿಮಿತಿಗಳನ್ನು ನಿಗದಿಪಡಿಸಿ ನೀಡುವುದು ಆಯಾ ಸ್ಥಳೀಯ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ ಹಾಗೂ ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಸೆಕ್ಷನ್ 4ರ ಪ್ರಕಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಣೆ ಮಾಡಲಾಗಿದ್ದು, ದಾಖಲಿತ ರಸ್ತೆಯ ಭೂಗಡಿಯ ಅಂಚನ್ನು ಗುರುತಿಸುವುದು ಆಯಾ ಕಾರ್ಯಪಾಲಕ ಇಂಜಿನಿಯರ್‌ಗಳ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶ ತಿಳಿಸಿದೆ.












Click it and Unblock the Notifications