Karnataka Highway Rain: ರಾಜ್ಯದ ಈ ಹೆದ್ದಾರಿಗಳಲ್ಲಿ ಮುಂದಿನ 24 ಗಂಟೆ ಭಾರಿ ಮಳೆ, ಗಮನಿಸಿ
ಬೆಂಗಳೂರು, ಮೇ 05: ತೀವ್ರತರವಾಗಿ ಬದಲಾದ ಹವಾಮಾನ ವೈಪರಿತ್ಯದ ಪರಿಣಾಮವಾಗಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಈ ಮಧ್ಯೆ ವಾರದ ರಜೆ ಇದೆ ಎಂದು ದೂರದ ಊರುಗಳಿಗೆ ಪ್ರಯಾಣ ಮಾಡುವವರು ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ ಎಂದು ಹವಾಮಾನ ಇಲಾಖೆಯ 'ಹೈವೇ' ಮಳೆ ಮುನ್ಸೂಚನೆ ವರದಿ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತವು ಇನ್ನೇನು 'ಮೋಚಾ' ಚಂಡಮಾರುತವಾಗಿ (Mocha Cyclone) ಬದಲಾಗುವ ಹಂತದಲ್ಲಿದೆ. ಇದರಿಂದಾಗಿ ಕೇವಲ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ರಾಷ್ಟ್ರೀಯ ಹೆದ್ದಾರಿ ಭಾಗದ ಪ್ರದೇಶದಲ್ಲೂ ಮುಂದಿನ 24 ಗಂಟೆ ಜೋರು ಮಳೆ ಬರುವ ಲಕ್ಷಣಗಳು ಇವೆ.

ಉದ್ಯಾನ ನಗರಿ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರು ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮಳೆ ಭೀತಿ ಕಾಡಲಿದೆ. ಇಲ್ಲಿ ಗುಡುಗು ಸಹಿತ ಜೋರು ಮಳೆ ಆಗಲಿದೆ. ಅದೇ ರೀತಿ ಬೆಂಗಳೂರಿ-ಮಂಗಳೂರು ಹೆದ್ದಾರಿಯಲ್ಲಿ ಹಾಸನ, ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಾಗಲಿದೆ.
ಖಾಸಗಿ ವಾಹನ ಸವಾರರು, ಸರಕು ಸೇವಾ ವಾಹನಗಳು, ದ್ವಿಚಕ್ರ ವಾಹನ ಸವಾರರು, ಪ್ರವಾಸಕ್ಕೆಂದು, ರಜಾದಿನಗಳಲ್ಲಿ ಮೋಜು ಮಸ್ತಿಗೆಂದು ತೆರಳುವವರು ಸುರಕ್ಷತೆ ವಹಿಸಬೇಕಿದೆ. ಇಲ್ಲವಾದರೆ ದಿಢೀರ್ ಮಳೆಗೆ ಸಿಲುಕಿಕೊಂಡು ಆಪತ್ತು ತಂದುಕೊಳ್ಳುವ ಇಲ್ಲವೇ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯೂ ಇದೆ.

ದಕ್ಷಿಣ ಕರ್ನಾಟಕದ ಭಾಗದ ಹೆದ್ದಾರಿ ಪ್ರದೇಶಗಳಲ್ಲಿ ಹೆಚ್ಚು ಮಳೆ
ಇನ್ನೂ ಬೆಂಗಳೂರಿನಿಂದ ಉತ್ತರ ಕರ್ನಾಟಕದೆಡೆಗೆ ಹೋಗುವ ವಾಹನ ಸವಾರರಿಗೆ ದಕ್ಷಿಣ ಕರ್ನಾಟಕ ಭಾಗದಲ್ಲೇ ಹೆಚ್ಚು ಮಳೆ ಕಾಣಲಿದ್ದಾರೆ. ಅಂದರೆ ಬೆಂಗಳೂರು-ಹಾವೇರಿ-ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ ತಲುಪುವ ವಿವಿಧ ರೀತಿಯ ವಾಹನ ಸವಾರರು ಮಳೆಯ ಕಿರಿಕಿರಿ ಅನುಭವಿಸಲಿದ್ದಾರೆ. ಮಧ್ಯ ಕರ್ನಾಟಕವರೆಗೆ ಅಂದರೆ ಬೆಂಗಳೂರು ಹಾಗೂ ತುಮಕೂರಿನಲ್ಲಿ ಆಗಾಗ ಮಳೆ ಬಂದರೆ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಭಾಗದಲ್ಲಿ ಕೆಲವೊಮ್ಮೆ ಮಾತ್ರವೇ ಗಾಳಿ ಸಹಿತ ಮಳೆಯ ಅಬ್ಬರ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಬೆಂಗಳೂರಿನಿಂದ ಗದಗ ಮತ್ತು ಬೆಂಗಳೂರಿನಿಂದ ಕಲಬುರಗಿ ಭಾಗದ ಹೆದ್ದಾರಿಯ ಕೆಲವೆಡೆ ಆಗಾಗ ವ್ಯಾಪಕ ಮಳೆ ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಬಹುತೇಕ ರಸ್ತೆಯುದ್ಧಕ್ಕೂ ತಂಪು ವಾತಾವರಣ ಮತ್ತು ಮೋಡ ಕವಿದ ವಾತಾವರಣವೇ ಕಂಡು ಬರಲಿದೆ. ತಾಪಮಾನ ಸಹ ಕಡಿಮೆ ದಾಖಲಾಗಿದೆ.
ಒಟ್ಟಾರೆ ಚಿತ್ರದುರ್ಗದಿಂದ ಬೆಂಗಳೂರುವರೆಗಿನ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-4), ಹಾಸನದವರೆಗೆ, ಬೆಂಗಳೂರಿನಿಂದ ಮೈಸೂರು, ಕೋಲಾರ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಿದೆ












Click it and Unblock the Notifications