Karnataka Rains: ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 04 ದಿನ ಭಾರೀ ಮಳೆ! ಯೆಲ್ಲೋ ಅಲರ್ಟ್..
ಬೆಂಗಳೂರು, ಜೂನ್ 22: ಕರ್ನಾಟಕದಾದ್ಯಂತ ಎರಡು ವಾರ ಬಿಟ್ಟು ಬಿಡದೇ ಸುರಿದಿದ್ದ ಮಳೆರಾಯನ ಅಬ್ಬರ ಕೊಂಚ ತಣ್ಣಗಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಸುರಿದು ಒಳನಾಡಿಗೂ ವ್ಯಾಪಿಸಿದ್ದ ಮುಂಗಾರು ಮಳೆ ರಾಜ್ಯದಲ್ಲಿ ದುರ್ಬಲಗೊಂಡಿದೆ. ಕೇವಲ ಕರಾವಳಿ ಸೇರಿ ಕೆಲ ಜಿಲ್ಲೆಗಳಲ್ಲಿ ಮಾತ್ರವೇ ಮುಂದಿನ 04 ದಿನ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರದ ವಿಜ್ಞಾನಿ ಡಾ.ಎನ್. ಪುವಿಯರಸನ್ ಅವರು ಮುನ್ಸೂಚನೆ ನೀಡಿದ್ದಾರೆ.
ತಮಿಳುನಾಡು ಸೇರಿದಂತೆ ಕರ್ನಾಟಕದಲ್ಲಿ ಎದ್ದಿದ್ದ ಹವಾಮಾನ ವೈಪರೀತ್ಯದ ಪ್ರಭಾವವು ಕೊನೆಗೊಂಡಿದೆ. ಅದರ ಪ್ರಭಾವ ಉತ್ತರ ಭಾರತ ರಾಜ್ಯಗಳ ಕಡೆಗೆ ಸಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಇಂದಿನಿಂದ ಭಾರೀ ಮಳೆಗೆ ಬ್ರೇಕ್ ಬಿದ್ದಿದೆ. ರಾಜ್ಯದ ಮೂರು ಜಿಲ್ಲೆಗಳಾದ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್ 23 ರಿಂದ ನಾಲ್ಕು ದಿನ ಸಾಧಾರಣದಿಂದ ಭಾರೀ ಮಳೆ ಆಗಬಹುದು. ಐಎಂಡಿ 'ಯೆಲ್ಲೋ ಅಲರ್ಟ್' ನೀಡಿದೆ. ಇದರ ಹೊರತು ಎಲ್ಲಿಯೂ ಧಾರಾಕಾರ ಮಳೆಯ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ಇಂದಿನ ವರದಿ ತಿಳಿಸಿದೆ.

ಇನ್ನೂ ಮಲೆನಾಡಿನ ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಆಗಾಗ ಜೋರು ಮಳೆ ಬರಬಹುದು. ಹೀಗಾಗಿ ಈ ಜಿಲ್ಲೆಗಳಿಗೂ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ, ಕೊಪ್ಪಳ, ಧಾರವಾಡ, ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ, ಕಲಬುರಗಿ, ಮೈಸೂರು ಸೇರಿದಂತೆ ವಿವಿಧೆಡೆ ಬಿಸಿಲಿನ ದರ್ಶನವಾಗಿದೆ. ಒಂದೆರಡು ಕಡೆ ತುಂತುರು ಮಳೆ ಆಗಿದ್ದು ಬಿದ್ದರೆ, ಎಲ್ಲಿಯೂ ಭಾರೀ ಮಳೆ ಲಕ್ಷಣ ಇಲ್ಲ.
ಕೆಲವೆಡೆ ಮಳೆ: ರಾಯಚೂರಲ್ಲಿ ಭಾರೀ ಬಿಸಿಲು
ಕರಾವಳಿ ಬಿಟ್ಟರೆ, ಆಗುಂಬೆ, ಮೂಡಿಗೆರೆ, ಗಂಗಾವತಿ, ಸಾಗರ, ಕಾರವಾರ, ಮಂಗಳೂರು ಕೆಲ ಭಾಗಗಳಲ್ಲಿ ನೆನ್ನೆ ಸಾಮಾನ್ಯ ಮಳೆಯ ದರ್ಶನವಾಗಿದೆ. ಎಲ್ಲಿಯೂ ವ್ಯಾಪಕ ಮಳೆ ದಾಖಲಾಗಿಲ್ಲ. ಇನ್ನೂ ತಾಪಮಾ ನೋಡುವುದಾದರೆ, ಈವರೆಗಿನ ಮಾಹಿತಿ ಪ್ರಕಾರ, ರಾಯಚೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ ಅಧಿಕ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ.
ಬೀದರ್ 32 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ, ಕೊಪ್ಪಳ, ಚಿತ್ರುದುರ್ಗದಲ್ಲಿ ತಲಾ 32ಡಿಗ್ರಿ ಸೆಲ್ಸಿಯಸ್ ತಾಪಮಾನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ 30 ಡಿಗ್ರಿ ಸೆಲ್ಸಿಯಸ್, ಮೈಸೂರು 30 ಡಿಗ್ರಿ ಸೆಲ್ಸಿಯಸ್, ಗದಗ 30 ಮತ್ತು ಹಾವೇರಿ ಭಾಗದಲ್ಲಿ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಗಾಗ ಬಿಸಿಲು, ಕೊಂಚ ಮಬ್ಬು ವಾತಾವರಣ ಕಂಡು ಬರುತ್ತಿದೆ. ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications