ರಾಜ್ಯಾದ್ಯಂತ ಸೂರ್ಯ ತಾಂಡವ, ಬಿಸಿಲ ಝಳಕ್ಕೆ ಕರುನಾಡು ತತ್ತರ - ಕೆಲವು ಜಿಲ್ಲೆಗಳಿಗೆ ಆಗಲಿದೆ ಮಳೆಯ ಸಿಂಚನ
ಬಿಸಿ ಗಾಳಿಯ ಅಲೆಗೆ ರಾಜ್ಯ ತತ್ತರಿಸಿದೆ. ಸಂಪೂರ್ಣ ರಾಜ್ಯ ಬಿಸಿಲ ಬೇಗೆಯಲ್ಲಿ ತೀವ್ರವಾಗಿ ಬಳಲುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಏಪ್ರಿಲ್‌ನಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿದೆ. ಕಲಬುರಗಿ ಮೇಲೆ ಈ ಸಲ ತಾಪಮಾನ ಅತಿ ಹೆಚ್ಚು ಪರಿಣಾಮ ಬೀರುತ್ತಿದೆ. ಹಲವಾರು ಪ್ರದೇಶಗಳಲ್ಲಿ ತಾಪಮಾನ 44°C ನಿಂದ 45°C ವರೆಗೆ ದಾಖಲಾಗುತ್ತಿದೆ. ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಉಷ್ಣತೆ ಹಿಂದಿನ ದಾಖಲೆಗಳನ್ನು ಮೀರಿದೆ. ಬೇಸಿಗೆಯ ಝಳ ರಾಜಧಾನಿ ಬೆಂಗಳೂರನ್ನು ಕೂಡಾ ಕಾಡುತ್ತಿದೆ. ಆದರೆ, ಈ ಸಂಕಷ್ಟ ಶೀಘ್ರವೇ ಬಗೆಹರಿಯಲಿದೆ. ಸದ್ಯಕ್ಕೆ ಈ ಬಿಸಿಲ ಝಳಕ್ಕೆ ಪರಿಹಾರ ಸಿಗುವ ನಿರೀಕ್ಷೆಯಿದೆ. ಕರ್ನಾಟಕದ ಹಲವಾರು ಭಾಗಗಳಲ್ಲಿ ಮಳೆಯ ಸಿಂಚನವಾಗಲಿದೆ. ಮಳೆ ಹನಿಗಳು ಧರೆಗಿಳಿಯುತ್ತಿರುವಂತೆಯೇ ಬಿಸಿ ಗಾಳಿಯ ರೌದ್ರಾವತಾರದಿಂದ ಜನತೆಗೆ ಪರಿಹಾರ ಸಿಗಲಿದೆ. ಶೀಘ್ರ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಏಪ್ರಿಲ್ 17 ಮತ್ತು 18 ರಂದು ಅಂದರೆ ಇಂದು ಮತ್ತು ನಾಳೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹವಾಮಾನ ಇಲಾಖೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಅದರ ಅರ್ಥ ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಿಸಿಗಾಳಿಯ ರಭಸ ಮತ್ತಷ್ಟು ಹೆಚ್ಚಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಇರಲಿದ್ದು ಯೆಲ್ಲೋ ಆಲರ್ಟ್ ನೀಡಲಾಗಿದೆ. ಆದರೆ ಸ್ವಲ್ಪ ಸಮಾಧಾನಕರ ಸಂಗತಿಯೆಂದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ದಟ್ಟವಾದ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 18 ರಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ 21 ರ ವೇಳೆಗೆ ಭಾರೀ ಮಳೆಯಾಗುವ ಸೂಚನೆಗಳಿವೆ. ಈ ಮೂಲಕ ಸೂರ್ಯನ ಶಾಖದಿಂದ ಬೇಸತ್ತಿರುವ ಜನರಿಗೆ ವಿಶ್ರಾಂತಿ ಸಿಗಲಿದೆ.

ಮಲೆನಾಡು ಪ್ರದೇಶದಲ್ಲಿ, ಅದರಲ್ಲಿಯೂ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಅನಿರೀಕ್ಷಿತ ಮಳೆಯಾಗಿದ್ದು, ಇದು ಮುಂದುವರಿಯುವ ನಿರೀಕ್ಷೆಯಿದೆ. ಕರಾವಳಿ ಪ್ರದೇಶಗಳು ಮತ್ತು ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಬಹುದು. ಏಪ್ರಿಲ್ 18 ರ ನಂತರ ಮಲೆನಾಡಿನಾದ್ಯಂತ ತಂಪಾದ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ.
ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 19 ಅಥವಾ 20 ರ ಸುಮಾರಿಗೆ ಈ ಪ್ರದೇಶದಲ್ಲಿ ಸ್ಥಿರವಾದ ಮಳೆಯಾಗುವ ನಿರೀಕ್ಷೆಯಿದೆ. ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.ಏಪ್ರಿಲ್ 18 ರ ನಂತರ ಈ ಪ್ರದೇಶಗಳಲ್ಲಿ ಬೀಸುವ ಗಾಳಿಯನ್ನು ಅವಲಂಬಿಸಿ ಈ ಪ್ರದೇಶದಲ್ಲಿ ಮಳೆ ಬರುವ ಸಾಧ್ಯತೆ ನಿರ್ಧಾರವಾಗಲಿದೆ.
ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ಸಾಧ್ಯತೆ ಇದೆ. ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ತಾಪಮಾನ 45°C ತಲುಪಿದ್ದು, ಚಿಂಚೋಳಿ ಮತ್ತು ಅಫ್ಜಲ್‌ಪುರದಲ್ಲಿ ಗರಿಷ್ಠ 44.03°C ದಾಖಲಾಗಿದೆ. ಕಲಬುರಗಿ ನಗರದಲ್ಲಿಯೇ 42.1°C ದಾಖಲಾಗಿದೆ. ತಾಪಮಾನವು ಸಾಮಾನ್ಯಕ್ಕಿಂತ 3-4°C ಹೆಚ್ಚಿರುವುದರಿಂದ, ಬೆಳಿಗ್ಗೆ 11:30 ರಿಂದ ಸಂಜೆ 5 ರವರೆಗೆ ಹೊರಗೆ ಹೋಗುದಂತೆ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರಣಮ್ ಸೂಚನೆ ನೀಡಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ತಾಪಮಾನವು ಮತ್ತಷ್ಟು ಏರಬಹುದು ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಇದು 38°C ತಲುಪುವ ಸಾಧ್ಯತೆಯಿದೆ. ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನವು 36-37°C ನಡುವೆ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಸದ್ಯಕ್ಕೆ ಒಣ ವಾತಾವರಣವಿದ್ದು, ಪ್ರತ್ಯೇಕ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆದರೂ, ಅವು ಅಲ್ಪಾವಧಿ ಮತ್ತು ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಅಂದರೆ ಇಲ್ಲಿ ಬಿಸಿ ಗಾಳಿಅಲೆಯ ಪರಿಣಾಮ ಹೀಗೆಯೇ ಮುಂದುವರಿಯಲಿದೆ.
ಇನ್ನು ಬೆಳಗಾವಿಯಲ್ಲಿ ತಾಪಮಾನವು 48°C ದಾಟಿದ್ದು, 25 ವರ್ಷಗಳ ದಾಖಲೆಯನ್ನು ಮುರಿಯುತ್ತಿದೆ ಎನ್ನಲಾಗಿದೆ. ತೀವ್ರವಾದ ಶಾಖವು ದೈನಂದಿನ ಜೀವನವನ್ನು ಕುಡಾ ಹೆಚ್ಚು ಕಷ್ಟಕರವಾಗಿಸಿದೆ.ಮಕ್ಕಳು ಮತ್ತು ವೃದ್ಧರು ವಿಶೇಷವಾಗಿ ದುರ್ಬಲರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅನಗತ್ಯವಾಗಿ ಹೊರ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
(ಬರಹ: ರಂಜಿತಾ ಆರ್.ಕೆ.)













Click it and Unblock the Notifications