ಮತ್ತೆ ಏಳು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಇದು ಕರ್ನಾಟಕ ಸರ್ಕಾರದ ಮೇಜರ್ ಆಪರೇಶನ್- ಯಾರು ತಿಳಿಯಿರಿ
ಐಪಿಎಸ್ ಅಧಿಕಾರಿ ಡಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿವಾದದ ಬಳಿಕ ರಾಜ್ಯ ಸರ್ಕಾರ ಮೇಜರ್ ಆಪರೇಶನ್‌ಗೆ ಕೈಹಾಕಿದೆ. ಈಗ ಮತ್ತೆ ಏಳು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು, ಫೆಬ್ರವರಿ 24: ಐಪಿಎಸ್ ಅಧಿಕಾರಿ ಡಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿವಾದದ ಬಳಿಕ ರಾಜ್ಯ ಸರ್ಕಾರ ಮೇಜರ್ ಆಪರೇಶನ್‌ಗೆ ಕೈಹಾಕಿದೆ. ರೂಪಾ, ಅವರ ಪತಿ, ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಅವರನ್ನು ಈಗಾಗಲೇ ವರ್ಗಾವಣೆ ಮಾಡಿದೆ. ಈಗ ಮತ್ತೆ ಏಳು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ದಕ್ಷಿಣ ಸಂಚಾರ ವಿಭಾಗಕ್ಕೆ ನೂತನ ಸಂಚಾರ ಡಿಸಿಪಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೊಸ ಹುದ್ದೆಯನ್ನು ಸೃಷ್ಟಿಸಿದೆ. 'ಮೊಹಮ್ಮದ್ ಸುಜೀತಾ ಎಂಎಸ್' ಅವರನ್ನು ಬೆಂಗಳೂರು ನಗರ ದಕ್ಷಿಣ ಸಂಚಾರ ವಿಭಾಗಕ್ಕೆ ಡಿಸಿಪಿಯಾಗಿ ನೇಮಿಸಿದೆ. ಅವರು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ), ಬೆಂಗಳೂರು ನಗರದಲ್ಲಿರುವ ಸಿಟಿ ಆರ್ಮ್ಡ್ ರಿಸರ್ವ್ (ಸಿಎಆರ್) ಪ್ರಧಾನ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮಂಗಳೂರು ನಗರದ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿಪಿ) ಮತ್ತು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎನ್ ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಿ ರೈಲ್ವೆ ಡಿಐಜಿಪಿಯಾಗಿ ನಿಯೋಜಿಸಲಾಗಿದೆ.
ಬೆಂಗಳೂರಿನ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನಿಯೋಜಿಸಲಾಗಿದೆ.
ಬೆಂಗಳೂರಿನ ವೈರ್‌ಲೆಸ್ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಸೇವೆ ಸಲ್ಲಿಸುತ್ತಿದ್ದ ಡೆಕ್ಕ ಕಿಶೋರ್ ಬಾಬು ಅವರು ಗುಪ್ತಚರ ಎಸ್‌ಪಿಯಾಗಿ ನಿಯೋಜನೆಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನಲ್ಲಿನ ಫಸ್ಟ್ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಡಾ ಕೋನ ವಂಶಿ ಕೃಷ್ಣ ಅವರನ್ನು ವರ್ಗಾಯಿಸಲಾಗಿದೆ.
ಅರುಣಾಂಗ್ಶು ಗಿರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರಿಗೆ ಡಿಸಿಪಿ, ಸಿಎಆರ್, ಪ್ರಧಾನ ಕಚೇರಿಯಲ್ಲಿ ಪೋಸ್ಟ್ ನೀಡಲಾಗಿದೆ.
ಬೆಳಗಾವಿಯ ಕರ್ನಾಟಕ ಲೋಕಾಯುಕ್ತ ಎಸ್ಪಿ ಯಶೋಧ ವಂಟಗೋಡಿ ಅವರನ್ನು ಕೊಪ್ಪಳ ಜಿಲ್ಲೆಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಹುದ್ದೆಗೆ ಸರ್ಕಾರ ಯಾವುದೇ ಅಧಿಕಾರಿಯನ್ನು ನಿಯೋಜಿಸಿಲ್ಲ. ಮತ್ತೊಂದು ಸುತ್ತಿನ ವರ್ಗಾವಣೆ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ರೂಪಾ- ರೋಹಿಣಿ ವಿವಾದ
ಖಾಸಗಿ ಫೋಟೋಗಳನ್ನು ಶೇರ್ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಜಗಳದ ನಂತರ ಕರ್ನಾಟಕ ಸರ್ಕಾರ ಮಂಗಳವಾರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿದೆ.
ಡಿ ರೂಪ ಅವರ ಐಎಎಸ್ ಪತಿ ಮುನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಈ ಹಿಂದೆಯೂ ಸಹ, ಇಬ್ಬರೂ ಮಹಿಳಾ ಅಧಿಕಾರಿಗಳು ಸಾರ್ವಜನಿಕವಾಗಿ ಸಂಘರ್ಷದಲ್ಲಿ ತೊಡಗಿದ್ದರು. ಈ ಬಾರಿ ಸಿಂಧೂರಿಯ ಅವರ ಮೇಲೆ ರೂಪಾ ಹಲವಾರು ಆರೋಪಗಳನ್ನು ಹೊರಿಸಿದ್ದಾರೆ. ಈ ಆರೋಪಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಿಂದ ವಿವಾದ ಹುಟ್ಟಿಕೊಂಡಿತ್ತು.
ರೂಪಾ ಅವರು ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. ಸಿಂಧೂರಿ ಅವರ ದುರ್ವರ್ತನೆ ಬಗ್ಗೆ ಮಾತನಾಡಿದ್ದಾರೆ. ಕೆಲವು ಪುರುಷ ಅಧಿಕಾರಿಗಳೊಂದಿಗೆ ರೋಹಿಣಿ ಅವರು ಖಾಸಗಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ ಎಂದು ರೂಪಾ ಆರೋಪಿಸಿದ್ದಾರೆ. ರೋಹಿಣಿ ಅವರ ವೈಯಕ್ತಿಕ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು.
ಆರೋಪಗಳು ಆಧಾರ ರಹಿತ ಎಂದಿರುವ ಸಿಂಧೂರಿ, ರೂಪಾ ಅವರು ವೈಯಕ್ತಿಕ ದ್ವೇಷದಿಂದ ತಮ್ಮ ವಿರುದ್ಧ ಇಂತಹ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಮತ್ತು ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರೂಪಾ ಅವರ ದುಷ್ಕೃತ್ಯ ಮತ್ತು ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಸೂಕ್ತ ಅಧಿಕಾರಿಗಳ ಮೂಲಕ ಕಾನೂನು ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಿಂಧೂರಿ ಹೇಳಿದ್ದಾರೆ.












Click it and Unblock the Notifications