ಈಗಲ್ ಟನ್ ರೆಸಾರ್ಟ್ ಗೆ 982 ಕೋಟಿ ದಂಡ ಹಾಕಿದ್ದು ಏಕೆ?
ಬೆಂಗಳೂರು, ಆ.2 : ಬಿಡದಿ ಬಳಿ ಇರುವ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಈಗ ಸುದ್ದಿಯಲ್ಲಿದೆ. ಗುಜರಾತ್ ಕಾಂಗ್ರೆಸ್ ಶಾಸಕರು ಇಲ್ಲಿ ವಾಸ್ತವ್ಯ ಹೂಡಿರುವಾಗಲೇ ಐಟಿ ದಾಳಿ ನಡೆಸಿದೆ. ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ರೆಸಾರ್ಟ್ ಗೆ 982 ಕೋಟಿ ರೂ.ಗಳ ದಂಡ ವಿಧಿಸಿತ್ತು.
ರಾಜ್ಯಸಭೆ ಚುನಾವಣೆ ಹಿನ್ನಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರು ಈಗಲ್ ಟನ್ ಗಾಲ್ಫ್ ರೆಸಾರ್ಟ್ ಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಬುಧವಾರ ಬೆಳಗ್ಗೆ ಹತ್ತಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ ರೆಸಾರ್ಟ್ ಮೇಲೆ ದಾಳಿ ಮಾಡಿದೆ. ಶಾಸಕರು ರೆಸಾರ್ಟ್ ಗೆ ಆಗಮಿಸಿದ ಎರಡು ದಿನದಲ್ಲಿಯೇ ಈ ದಾಳಿ ನಡೆದಿರುವುದು ವಿಶೇಷ.

ಕರ್ನಾಟಕದ ರೆಸಾರ್ಟ್ ರಾಜಕೀಯದ ಬಗ್ಗೆ ಮಾತನಾಡುವಾಗಲೂ ಬಿಡದಿ ಬಳಿ ಇರುವ ಈಗಲ್ ಟನ್ ಗಾಲ್ಪ್ ರೆಸಾರ್ಟ್ ನೆನೆಪು ಮಾಡಿಕೊಳ್ಳಬೇಕು. ರೆಸಾರ್ಟ್ ನಲ್ಲಿ ಶಾಸಕರ ಒಂದು ದಿನದ ವಾಸ್ತವ್ಯಕ್ಕೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ.
2000ನೇ ಇಸವಿಯಲ್ಲಿ ಬಿಡದಿ ಬಳಿ 509 ಎಕರೆ ಜಾಗದಲ್ಲಿ ರೆಸಾರ್ಟ್ ನಿರ್ಮಾಣವಾಯಿತು. ಪ್ರವಾಸೋದ್ಯಮ ನೀತಿಯಡಿ ಕರ್ನಾಟಕ ಸರ್ಕಾರ ಜಮೀನು ನಿರ್ಮಾಣಕ್ಕೆ ಜಾಗವನ್ನು ನೀಡಿತ್ತು. ಆದರೆ, ಬಳಿಕ ರೆಸಾರ್ಟ್ 77 ಎಕರೆ ಜಾಗವನ್ನು ರೆಸಾರ್ಟ್ ನವರು ಒತ್ತುವರಿ ಮಾಡಿಕೊಂಡಿದ್ದಾರೆ.
ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಅನ್ನು ಆಂಧ್ರಪ್ರದೇಶ ಮೂಲದ ಉದ್ಯಮಿ ಮೇದ ಅಶೋಕ್ ಕುಮಾರ್ ನಿರ್ಮಿಸಿದರು. ಸದ್ಯ, ಅವರ ಮಕ್ಕಳಾದ ಕಿರಣ್ ಕುಮಾರ್ ಮತ್ತು ಚೇತನ್ ರೆಸಾರ್ಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
'ಈಗಲ್ ಟನ್ ಗಾಲ್ಫ್ ರೆಸಾರ್ಟ್ 77 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ. ಆದ್ದರಿಂದ, ದಂಡ ವಿಧಿಸಲಾಗಿತ್ತು ಇಲ್ಲವೇ ಜಾಗವನ್ನು ಸರ್ಕಾರಕ್ಕೆ ವಾಪಸ್ ನೀಡಬೇಕು ಎಂದು ಸೂಚಿಸಲಾಗಿತ್ತು' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.












Click it and Unblock the Notifications