ಸರ್ಕಾರಿ ಶಾಲಾ ಮಕ್ಕಳಿಗೂ ಇನ್ಮುಂದೆ ಷೇರು ಮಾರುಕಟ್ಟೆ, ಬ್ಯಾಂಕಿಂಗ್ ಪಾಠ: ಶಿಕ್ಷಣ ಇಲಾಖೆಯಿಂದ ಹೊಸ ಉಪಕ್ರಮ
ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹಣಕಾಸಿನ ನಿರ್ವಹಣೆ ಅತ್ಯಂತ ಅವಶ್ಯಕವಾಗಿದೆ. ಇದನ್ನರಿತ ರಾಜ್ಯ ಸರ್ಕಾರ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆಯ ಪಾಠ ಮಾಡಲು ಮುಂದಾಗಿದೆ. ಇನ್ನು ಮುಂದೆ ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ ಬ್ಯಾಂಕಿಂಗ್, ಉಳಿತಾಯ, ಹೂಡಿಕೆ ಮತ್ತು ಷೇರು ಮಾರುಕಟ್ಟೆಯಂತಹ ಬದುಕಿಗೆ ಅಗತ್ಯವಾದ ಆರ್ಥಿಕ ವಿಚಾರಗಳ ಬಗ್ಗೆಯೂ ಕಲಿಯಲಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಹಣಕಾಸು ಸಾಕ್ಷರತಾ ಉಪಕ್ರಮ'ದ ಅಡಿಯಲ್ಲಿ ಈ ಹೊಸ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ.

956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಯೋಜನೆ ಜಾರಿ
ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ರಾಜ್ಯಾದ್ಯಂತ ಇರುವ ಒಟ್ಟು 956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಮುಖ್ಯವಾಗಿ ಹೈಸ್ಕೂಲ್ ಹಾಗೂ ಪಿಯುಸಿ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ.
ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಹಣದ ಮೌಲ್ಯ, ಭವಿಷ್ಯದ ಹಣಕಾಸು ಯೋಜನೆ ಮತ್ತು ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.
ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮತ್ತು ಷೇರು ಮಾರುಕಟ್ಟೆ ಶಿಕ್ಷಣ
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳಿಗೆ ಆರ್ಥಿಕ ವ್ಯವಹಾರಗಳ ಬಗ್ಗೆ ತರಬೇತಿ ನೀಡಲು ಬ್ಯಾಂಕ್ ಅಧಿಕಾರಿಗಳು, ಆರ್ಥಿಕ ಸಲಹೆಗಾರರು, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳ ಬೋಧಕ ಸಿಬ್ಬಂದಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ಗಳನ್ನ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ದೈನಂದಿನ ಉಳಿತಾಯ, ಡಿಜಿಟಲ್ ಪಾವತಿ ವ್ಯವಸ್ಥೆ, ಜವಾಬ್ದಾರಿಯುತವಾಗಿ ಸಾಲ ಪಡೆಯುವಿಕೆ, ವಿಮೆ ಹಾಗೂ ತೆರಿಗೆಯ ಮೂಲಭೂತ ಅಂಶಗಳ ಕುರಿತು ಪಾಠ ಮಾಡಲಾಗುತ್ತದೆ.
ಇದರ ಜೊತೆಗೆ, ಶಾಲಾ ಪಠ್ಯದಲ್ಲಿ ಹಣಕಾಸು ನಿರ್ವಹಣೆ ಹಾಗೂ ಷೇರು ಮಾರುಕಟ್ಟೆಯ ಪರಿಕಲ್ಪನೆಗಳು, ಷೇರುಗಳ ಖರೀದಿ-ಮಾರಾಟ, ವಹಿವಾಟು ಹಾಗೂ ಮ್ಯೂಚುವಲ್ ಫಂಡ್ನಂತಹ ಹೂಡಿಕೆಗಳ ಬಗ್ಗೆಯೂ ಪ್ರಾಥಮಿಕ ಮಾಹಿತಿಯನ್ನು ಪರಿಚಯಿಸಲಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಹಣಕಾಸು ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಹಣಕಾಸು ವಂಚನೆ ಜಾಗೃತಿ
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಆರ್ಥಿಕ ವಂಚನೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವುಗಳಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಸುರಕ್ಷತಾ ಮಾರ್ಗಗಳ ಬಗ್ಗೆಯೂ ಈ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗುತ್ತದೆ. ಬರೀ ಭಾಷಣದ ಮೂಲಕವಲ್ಲದೆ, ಸಂವಾದಾತ್ಮಕ ತರಗತಿಗಳು, ಪ್ರದರ್ಶನಗಳು ಮತ್ತು ಅಣಕು ಬ್ಯಾಂಕಿಂಗ್ ಚಟುವಟಿಕೆಗಳ ಮೂಲಕ ಪ್ರಾಯೋಗಿಕ ಅನುಭವವನ್ನ ನೀಡಲಾಗುತ್ತದೆ.
ಶೈಕ್ಷಣಿಕ ಪ್ರವಾಸ
ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆಯ ಕಾರ್ಯನಿರ್ವಹಣೆ ತೋರಿಸಲು ಬೆಂಗಳೂರು ಷೇರು ವಿನಿಮಯ ಕೇಂದ್ರ ಹಾಗೂ ವಿವಿಧ ಬ್ಯಾಂಕ್ಗಳಿಗೆ ಶೈಕ್ಷಣಿಕ ಪ್ರವಾಸಗಳನ್ನ ಆಯೋಜಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಎಟಿಎಂ ಹಾಗೂ ಯುಪಿಐ ಬಳಕೆಯ ಲೈವ್ ಪ್ರಾತ್ಯಕ್ಷಿಕೆಗಳು, ಮನೆ ಬಜೆಟ್ ಸಿದ್ಧಪಡಿಸುವ ವಿಧಾನ, ಸರಳ ಬಡ್ಡಿ ಲೆಕ್ಕಾಚಾರ, ಪೋಸ್ಟರ್ ತಯಾರಿಕೆ ಮತ್ತು ಆರ್ಥಿಕ ರಸಪ್ರಶ್ನೆ ಸ್ಪರ್ಧೆಗಳನ್ನ ಶಾಲಾ ಹಂತದಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಈ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು, ಪ್ರತಿಯೊಂದು ಶಾಲೆಯೂ ತಮ್ಮ ಸಮೀಪದ ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ಮತ್ತು ವಾಣಿಜ್ಯ ಕಾಲೇಜುಗಳೊಂದಿಗೆ ಸಮನ್ವಯ ಸಾಧಿಸಿ ವಾರ್ಷಿಕ ಚಟುವಟಿಕೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡಿದೆ.


Click it and Unblock the Notifications
